ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ
ಕಾಯಂ ವೈದ್ಯರಿಲ್ಲದೆ ಸೊರಗಿದ್ದ ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆ ಕುರಿತು ‘ವಿಜಯವಾಣಿ’ ಪ್ರಕಟಿಸಿದ್ದ ವರದಿಗೆ ಸರ್ಕಾರ ಸ್ಪಂದಿಸಿದ್ದು, ಸದ್ಯಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ವಾರದಲ್ಲಿ ಎರಡು ದಿನ ಬಿಳಿಗೇರಿ ಪಿಎಚ್‌ಸಿಗೆ ನಿಯೋಜಿಸಲಾಗಿದೆ.
ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಲವು ವರ್ಷಗಳಿಂದ ಕಾಯಂ ವೈದ್ಯರಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಕುರಿತು ಜು.31ರಂದು ‘ಕಾಯಂ ವೈದ್ಯರಿಲ್ಲದೆ ಸೊರಗಿದ ಬಿಳಿಗೇರಿ ಆಸ್ಪತ್ರೆ’ ಎಂಬ ಶೀರ್ಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಸುಸಜ್ಜಿತ ಕಟ್ಟಡ, ಬೆಡ್‌ಗಳು ಹಾಗೂ ಅಗತ್ಯ ಮೂಲಸೌಕರ್ಯಗಳಿದ್ದರೂ ವೈದ್ಯರಿಲ್ಲದೆ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಬಿಳಿಗೇರಿ ಮಾತ್ರವಲ್ಲದೆ ಕಿರಗಂದೂರು, ತಾಕೇರಿ, ಕುಂಬೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಇದರಿಂದ ತೊಂದರೆ ಅನುಭವಿಸುತ್ತಿರುವುದನ್ನು ವರದಿಯಲ್ಲಿ ವಿವರಿಸಲಾಗಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಸ್ಪಂದಿಸಿದ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು, ಬಿಳಿಗೇರಿ ಪಿಎಚ್‌ಸಿಗೆ ವೈದ್ಯರನ್ನು ನೇಮಿಸುವಂತೆ ಆರೋಗ್ಯ ಇಲಾಖೆಯ ವಿಭಾಗೀಯ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಈ ಸೂಚನೆ ಹಿನ್ನೆಲೆಯಲ್ಲಿ ‘ಆ.5ರಂದು ಡಿಎಚ್‌ಒ ಕಚೇರಿಯಿಂದ ವೈದ್ಯರ ನೇಮಕಾತಿಗಾಗಿ ಜಾಹೀರಾತು ಹೊರಡಿಸಲಾಗಿದೆ. ಆದರೆ ಬಿಳಿಗೇರಿ ಪಿಎಚ್‌ಸಿಯಲ್ಲಿ ಸೇವೆ ಸಲ್ಲಿಸಲು ಯಾವುದೇ ವೈದ್ಯರು ಸ್ಥಳ ಆಯ್ಕೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ತಕ್ಷಣದ ಪರಿಹಾರ ಕ್ರಮವಾಗಿ ಸೂರ್ಲಬ್ಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ವಾರದಲ್ಲಿ ಎರಡು ದಿನ ಬಿಳಿಗೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ನಿಯೋಜಿಸಲಾಗಿದೆ’ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಆರೋಗ್ಯ ಇಲಾಖೆಯ ವಿಭಾಗೀಯ ನಿರ್ದೇಶಕರಿಗೆ ಪತ್ರ ಮುಖೇನ ಪ್ರತಿಕ್ರಿಯಿಸಿದ್ದಾರೆ.