ಮಡಿಕೇರಿ ಕೋಟೆಯ ಸಮಗ್ರ ನವೀಕರಣ, ಸಂರಕ್ಷಣೆ ಹಾಗೂ ತಾಂತ್ರಿಕ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಮನವಿ ಸಲ್ಲಿಸಿದರು.
ಕೊಡಗಿನ ಐತಿಹಾಸಿಕ ಮಡಿಕೇರಿ ಕೋಟೆಯ ಸಮಗ್ರ ನವೀಕರಣ, ಸಂರಕ್ಷಣೆ ಹಾಗೂ ತಾಂತ್ರಿಕ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಸಚಿವರ ಮೈಸೂರು ಭೇಟಿಯ ಸಂದರ್ಭ ಮೈಸೂರು ಜತೆಯಲ್ಲಿ ಕೊಡಗಿನ ಪ್ರಮುಖ ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳಿಗೆ ಸಂಬAಧಿಸಿದAತೆ ಈ ಮನವಿ ಮಾಡಿಕೊಂಡಿದ್ದಾರೆ.
ಕೊಡಗಿನ ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪದ ವೈಭವದ ಪ್ರತೀಕವಾಗಿರುವ ಮಡಿಕೇರಿ ಕೋಟೆ ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿನ ಐತಿಹಾಸಿಕ ಕಟ್ಟಡಗಳ ವೈಜ್ಞಾನಿಕ ರಕ್ಷಣೆ ಮತ್ತು ಪುನಶ್ಚೇತನ, ಆಧುನಿಕ ಪರಂಪರೆ ವಸ್ತುಸಂಗ್ರಹಾಲಯದ ಸ್ಥಾಪನೆ, ಡಿಜಿಟಲ್ ಮಾಹಿತಿ ವ್ಯವಸ್ಥೆಗಳು ಮತ್ತು ಬಹುಭಾಷಾ ಆಡಿಯೋ ಮಾರ್ಗದರ್ಶಿಗಳ ಅಳವಡಿಕೆ, ಧ್ವನಿ ಮತ್ತು ಬೆಳಕಿಒನ ಪ್ರದರ್ಶನ, ಪರಿಸರ ಸ್ನೇಹಿ ಪಾದಚಾರಿ ಮಾರ್ಗಗಳು ಮತ್ತು ಸುಂದರೀಕರಣ ವಾಹನ ನಿಲುಗಡೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಸಂಸದರು ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಯೋಜನೆಗಳಿಂದ ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದರ ಜತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಸ್ಥಳೀಯ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಲಿವೆ ಎಂದು ಅಭಿಪ್ರಾಯಪಟ್ಟಿರವ ಯದುವೀರ್, ಪ್ರವಾಸೋದ್ಯಮ ಮತ್ತು ಪರಂಪರೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಅಗತ್ಯ ಸಮೀಕ್ಷೆಗಳನ್ನು ಕೈಗೊಂಡು ಸೂಕ್ತ ಆರ್ಥಿಕ ನೆರವು ನೀಡುವಂತೆ ಸಚಿವಾಲಯವನ್ನು ಮನವಿ ಮಾಡಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ತಾವು ನಿರಂತರವಾಗಿ ಬದ್ಧರಾಗಿರುವುದಾಗಿ ಪುನರುಚ್ಚರಿಸಿರುವ ಸಂಸದರು ಈ ಭಾಗದ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿ ಬೆಳೆಸುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.