ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರಿಗೆ ಹೇರೂರು ಗ್ರಾಮಸ್ಥರು ಮನವಿ ಸಲ್ಲಿಸಿದರು. ಚಂದ್ರಶೇಖರ್ ಹೇರೂರು, ರಾಜೀವ್ ಕುಶಾಲನಗರ, ಜಗನಾಥ್ ಮಂದೊಡಿ, ಬಿ.ಎಸ್. ವಸಂತ, ನಂಜೇಗೌಡ ಮತ್ತಿತರರು ಇದ್ದರು. 
ಕೊಡಗು

ಮತಾಂತರ ವಿರುದ್ಧ ಕ್ರಮಕ್ಕೆ ಮನವಿ

ಸುನಿಲ್ ಪೊನ್ನೇಟಿ
ಮಡಿಕೇರಿ:
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ನಿರಂತರವಾಗಿ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದು ಮತಾಂತರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೇರೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಇತ್ತೀಚೆಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಮತಾಂತರ ಮಾಡಲು ತಮಿಳುನಾಡಿನಿಂದ ಬಂದು ಸರ್ಕಾರಿ ಜಾಗದಲ್ಲಿ ಪಂಚಾಯಿತಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸಂಬAಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂಧುಮಣಿ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಲಾಯಿತು.
ತಮಿಳುನಾಡಿನಿಂದ ವಾಹನದಲ್ಲಿ ಬಂದು ಹೇರೂರು ಗ್ರಾಮದ ನಿವಾಸಿಯೊಬ್ಬರ ಮನೆಯಲ್ಲಿ ಮತಾಂತರ ಮಾಡುವುದರ ಜತೆಗೆ ಪರವಾನಗೆ ಇಲ್ಲದೆ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ವ್ಯಕ್ತಿಯೊಬ್ಬರ ನೇತೃತ್ವದಲ್ಲಿ ಚರ್ಚ್ ನಿರ್ಮಾಣ ಮಾಡಿ ಉದ್ಘಾಟನೆಯಲ್ಲಿ ಪಾಲ್ಗೊಂಡಿರು. ಅಲ್ಲದೆ ಅಲ್ಲಿರುವ ಕೆಲವು ಮನೆಗಳಿಗೆ ತೆರಳಿ ಬುಡಕಟ್ಟು ಮತ್ತು ಸ್ಥಳೀಯರನ್ನು ಮತಾಂತಗೊಳಿಸಲು ಪ್ರಯತ್ನಿಸಿದಾಗ ನಮಗೆ ವಿಷಯ ತಿಳಿದು ಗ್ರಾಮಸ್ಥರು ಕೂಡಲೇ ಸುಂಟಿಕೊಪ್ಪ ಠಾಣೆಗೆ ದೂರು ನೀಡಿದ್ದೇವೆ. ಹಣದ ಆಮಿಷವನ್ನು ಒಡ್ಡಿ ಬುಡಕಟ್ಟಿನ ಮುಗ್ಧ ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಇದರ ಬಗ್ಗೆ ಪರಿಶೀಲಿಸಿ ಸರ್ಕಾರಿ ಜಾಗದಲ್ಲಿ ಪಂಚಾಯಿತಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಚರ್ಚ್ ಅನ್ನು ತೆರವುಗೊಳಿಸಿ ಹೊರರಾಜ್ಯದಿಂದ ಬಂದು ಇಲ್ಲಿಯವರೊಂದಿಗೆ ಸೇರಿಕೊಂಡು ಮತಾಂತರ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಹೇರೂರು, ರಾಜೀವ್ ಕುಶಾಲನಗರ, ಪಂಚಾಯತಿ ಮಾಜಿ ಅಧ್ಯಕ್ಷ ಜಗನಾಥ್ ಮಂದೊಡಿ, ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಬಿ.ಎಸ್. ವಸಂತ, ಕಾರ್ಯದರ್ಶಿ ನಂಜೇಗೌಡ, ಊರಿನ ಪ್ರಮುಖರಾದ ಅರುಣ್ ಚೆಂಗಪ್ಪ, ಡಿಸಂತ್, ಬಿ.ಎಸ್. ಸುನೀಲ್, ಕೆ.ಎಸ್. ಗಣೇಶ್ , ಕೆ.ಎಸ್. ರಮೇಶ್, ಬಿ.ಎಸ್. ರೇಣುಕುಮಾರ್, ಸಿ.ಎಂ. ಜಯಪ್ರಕಾಶ್, ಬಿ.ಎಸ್. ರಂಜನ್, ಚರಣ್ ತೆಕ್ಕಡೆ, ಜಗತ್, ಅಪ್ಪುನು, ಪೃಥ್ವಿರಾಜ್ ಮತ್ತು ಡಯಾನ ಈ ಸಂದರ್ಭ ಇದ್ದರು.