ಶನಿವಾರಸಂತೆ ಸಮೀಪತ ಮುಳ್ಳೂರು ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. 
ಕೊಡಗು

ಮುಳ್ಳೂರು ಶ್ರೀ ಬಸವೇಶ್ವರಸ್ವಾಮಿ ದೇವರ ವಾರ್ಷಿಕ ಪೂಜೆ ಸಂಪನ್ನ

ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ಮತ್ತು ಅದ್ದೂರಿಯಾಗಿ ಮಂಗಳವಾರ ಸಂಪನ್ನಗೊಂಡಿತು.
ಸೋಮವಾರ ಬೆಳಗ್ಗೆ 8 ಗಂಟೆಗೆ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಹೂವಿನ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಜೆ 6 ಗಂಟೆಗೆ ಮುಳ್ಳೂರು ಜಂಕ್ಷನ್‌ನಲ್ಲಿರುವ ಅರಳಿಕಟ್ಟೆಯಿಂದ ವಾದ್ಯಗೋಷ್ಠಿ ಸಹಿತ ಮಹಿಳೆಯರು ಕುಂಬ ಕಳಸದೊಂದಿಗೆ ಅಡ್ಡಪಲ್ಲಕ್ಕಿ ಮೆರವಣಿಗೆ ಗ್ರಾಮದ ಮುಖ್ಯಬೀದಿಗಳಲ್ಲಿ ಸಾಗಿತು. ನಂತರ ಅಡ್ಡಪಲ್ಲಿಕ್ಕಿ ಉತ್ಸವದ ಮೆರವಣಿಗೆ ಶ್ರೀ ಬಸವೇಶ್ವರ ದೇವಸ್ಥಾನವನ್ನು ತಲುಪಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದ ನಂತರ ಶ್ರೀ ಬಸವೇಶ್ವರಸ್ವಾಮಿಯ ಮೂರ್ತಿಯನ್ನು ದೇವಸ್ಥಾನದಲ್ಲಿ ಇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಗ್ಗೆ ದೇವಸ್ಥಾನದ ಮುಂಭಾಗದಲ್ಲಿ ಭಕ್ತಾದಿಗಳು ಸಾಂಪ್ರದಾಯಿಕ ಕೊಂಡ ಹಾಯುವ ಮೂಲಕ ದೇವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು. ಪೂಜಾ ಮಹೋತ್ಸವ ಅಂಗವಾಗಿ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನ ಸಂತರ್ಪಣೆ ನಡೆಸಲಾಯಿತು. ಅರ್ಚಕ ಶಾಂತರಾಜ್ ಅವರ ನೇತೃತ್ವದಲ್ಲಿ ಅರ್ಚಕರು ಪೂಜಾ ವಿಧಿ-ವಿಧಾನ ನಡೆಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಅಕ್ಕಪಕ್ಕದ ಭಕ್ತಾಧಿಗಳು ಪಾಲ್ಗೊಂಡಿದ್ದರು.