ಸೋಮವಾರಪೇಟೆ ತಾಲೂಕಿನ ಗಣಗೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕ ಪೂಜೆಯಲ್ಲಿ ಯುವಕರು ಅಡ್ಡಪಲ್ಲಕ್ಕಿಯನ್ನು ಹೊತ್ತು ಕುಣಿದರು.
ಸೋಮವಾರಪೇಟೆ: ಗಣಗೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಲ್ಲಿ ವಾರ್ಷಿಕ ಪೂಜೆ ಸೋಮವಾರ ಮತ್ತು ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮಸ್ಥರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದಲ್ಲಿ ಶಾಂತಿ ಸುಭಿಕ್ಷೆ ಸಕಾಲಕ್ಕೆ ಮಳೆ, ಬೆಳೆಯಾಗುವಂತೆ ಮತ್ತು ರೋಗ ರುಜಿನಗಳು ಗ್ರಾಮಕ್ಕೆ ಆವರಿಸದಂತೆ ಬೇಡಿಕೊಳ್ಳಲಾಯಿತು. ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
ಗ್ರಾಮದ ಸೇರಿದ ಗದ್ದೆಯಲ್ಲಿ ದೇವರಿಗೆ ಗಂಗೆ ಪೂಜೆ ಸಲ್ಲಿಸಿ ಮಹಿಳೆಯರು ಕಳಸ ಹೊತ್ತು ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಮನೆ ಮುಂದೆ ಆಗಮಿಸಿದ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಈಡುಗಾಯಿ ಹಾಕಿದರು.
ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್, ಗ್ರಾಮದ ಹಿರಿಯರಾದ ಜಿ.ಡಿ.ಜಗದೀಶ್, ಸೋಮಶೇಖರ, ಪರಮೇಶ್, ಶರತ್, ಗಣೇಶ್ ಶ್ಯಾಮ್ ಇನ್ನಿತರರಿದ್ದರು. ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.