ಸುಂಟಿಕೊಪ್ಪದ ವಸೂರಿ ಮಾಲೆ ಗದ್ದೆಹಳ್ಳದ ಮುಖ್ಯ ಬೀದಿಗಳಲ್ಲಿ ದೇವರ ಮೆರವಣಿಗೆ ತೆರಳುತ್ತಿರುವುದು.
ಸುಂಟಿಕೊಪ್ಪ: ಕೊಡಂಗಲ್ಲೂರ್ ಶ್ರೀ ಕುರಂಭ (ಭಗವತಿ) ದೇವಸ್ಥಾನದಲ್ಲಿ ಗುರುವಾರ ವಿಶೇಷ ವಾರ್ಷಿಕ ಮಹಾಪೂಜೆಯೊಂದಿಗೆ ಆರಂಭಗೊಂಡು ರಾತ್ರಿ ಬೆಳ್ಳಾಟಂ ಹಾಗೂ ಶುಕ್ರವಾರ ಬೆಳಗ್ಗೆ ಹರಕೆಗಳನ್ನು ಭಕ್ತಾದಿಗಳು ಶ್ರದ್ಧಾ-ಭಕ್ತಿಯಿಂದ ಸಮರ್ಪಿಸುವುದರೊಂದಿಗೆ ದೇವಾಲಯದ ವಾರ್ಷಿಕೋತ್ಸವವು ಸಂಪನ್ನಗೊಂಡಿತು.
ಕೊಡಗಂಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ 60ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ಕೇಸರಿ ಬಂಟಿಂಗ್ಸ್, ಬಣ್ಣ ಬಣ್ಣದ ಹೂಗಳು, ವಿದ್ಯುತ್ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.
ವಾರ್ಷಿಕ ಮಹೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಗಣಪತಿ ಹೋಮ ನಡೆಯಿತು. ಸಂಜೆ 4 ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವುದು, ಶ್ರೀ ಗಣಪತಿ ಮತ್ತು ಸುಬ್ರಮಣ್ಯಸ್ವಾಮಿ ದೇವರ ಪೂಜೆ, ಮುತ್ತಪ್ಪ ದೇವರ ಬೆಳ್ಳಾಟ ಮತ್ತು ಪೈಗುಂತಿ, 7.30 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ಗುಳಿಗನ ಪೂಜೆ, 8.15 ಗಂಟೆಗೆ ಶ್ರೀ ಭದ್ರಕಾಳಿ ದೇವಿಗೆ ಅರ್ಚನೆ, ನೈವೇಧ್ಯ ಪೂಜೆ, 8.45 ಗಂಟೆಗೆ ಶ್ರೀ ದೇವಿ ದರ್ಶನ, 9 ಗಂಟೆಗೆ ತಲಪುರಿ ಮೆರವಣಿಗೆ, 9.30 ಗಂಟೆಗೆ ವಸೂರಿ ಮಾಲೆ ದೇವರ ಬೆಳ್ಳಾಟಂ, 9.45 ಗಂಟೆಗೆ ದೇವಿ ದರ್ಶನ ನಂತರ ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇವಿಯ ದರ್ಶನ, 10.45 ಗಂಟೆಗೆ ದೇವಿಗೆ ಹರಕೆಯ ನಂತರ ದೇವಿಗೆ ಅರ್ಪಣೆಗಳನ್ನು ಭಕ್ತಾದಿಗಳು ನೆರವೇರಿಸಿದರು. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ನೂರಾರು ಸಂಖ್ಯೆಯ ಭಕ್ತರಿಗೆ 2 ದಿನಗಳವರೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪ, ಶ್ರೀದೇವಿ, ಹರದೂರು, ನಾಕೂರು, ಕಂಬಿಬಾಣೆ, ಮತ್ತಿಕಾಡು, ಕೇರಳ ರಾಜ್ಯದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ದೇವಾಲಯದ ಮುಖ್ಯಸ್ಥರಾದ ಪಿ.ಆರ್.ಶಾಂತರಾಮಕೃಷ್ಣ, ಪಿ.ಆರ್.ಸುಕುಮಾರ್, ಸುನಿಲ್‌ಕುಮಾರ್ ಸೇರಿದಂತೆ ಇತರರು ಇದ್ದರು.