ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ ಏಪ್ರಿಲ್ 3ರಿಂದ 5ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ.ಚಂದ್ರನ್ ಹೇಳಿದರು.
ನಾಪೋಕ್ಲು: ಇಲ್ಲಿನ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವ ಏಪ್ರಿಲ್ 3ರಿಂದ 5ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದು ಎಂದು ಪೊನ್ನು ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ.ಚಂದ್ರನ್ ಹೇಳಿದರು.
ವಾರ್ಷಿಕ ಉತ್ಸವದ ಅಂಗವಾಗಿ ಏ.3ರಂದು ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಕೇರಳದ ನೀಲೇಶ್ವರ ಮುರಳಿ ಕೃಷ್ಣ ತಂತ್ರಿ ಅವರಿಂದ ಶುದ್ಧ ಕಳಸ ನೆರವೇರಲಿದೆ ಎಂದರು.
ಸಂಜೆ ಗುರು ಪೂಜೆ ಹಾಗೂ ಶ್ರೀದೇವಿ ಪೂಜೆ ನಡೆಯಲಿದೆ. ಏಪ್ರಿಲ್ 4ರಂದು ಮಧ್ಯಾಹ್ನ 3ಗಂಟೆಗೆ ಪೈಂಗುತ್ತಿ, 6ಗಂಟೆಗೆ ಪವಿತ್ರ ಕಾವೇರಿ ನದಿಯಲ್ಲಿ ಮುತ್ತಪ್ಪ ದೇವರ ಕಳಸ ಸ್ನಾನದ ನಂತರ ಪ್ರಖ್ಯಾತ ಕೇರಳದ ಚಂಡೆಯೊಂದಿಗೆ ಮೆರವಣಿಗೆ ಪಟ್ಟಣದಲ್ಲಿ ಮುಖ್ಯಬೀದಿಯಲ್ಲಿ ಸನ್ನಿಧಾನಕ್ಕೆ ಆಗಮಿಸಲಿದೆ. ಸಂಜೆ 7.30 ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ ಬಳಿಕ 10.30ಗಂಟೆಗೆ ಕುಟ್ಟಿಚಾತ ದೇವರು ಮತ್ತು ಗುಳಿಗ ದೇವರ ವೆಳ್ಳಾಟಂ ನಡೆಯಲಿದೆ. ಏಪ್ರಿಲ್ 5ರಂದು ಬೆಳಗ್ಗೆ ಗುಳಿಗ ತೆರೆ, ಬಳಿಕ ದೇವರ ಚರಿತ್ರೆ ಹಾಡಿನ ಮೂಲಕ ಹಾಡಿಕೊಂಡು ನೃತ್ಯ, ಬಳಿಕ ಕುಟ್ಟಿಚಾತ ಕೋಲ ಹಾಗೂ ತಿರುವಪ್ಪ ಮತ್ತು ಮುತ್ತಪ್ಪ ಕೊಲಗಳು ಜರುಗಲಿವೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವಂತೆ ಅವರು ಮನವಿ ಮಾಡಿಕೊಂಡರು.
ದೇವಾಲಯದಲ್ಲಿ ಪ್ರತಿ ಶನಿವಾರ ಪೈಂಗುತ್ತಿ ಹಾಗೂ ಪ್ರತಿ ತಿಂಗಳ 15ರಂದು ವೆಳ್ಳಾಟಂ ಜರುಗಲಿದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ಕೆ.ತಂಗಾ, ಕಾರ್ಯದರ್ಶಿ ಪಿ.ಕೆ.ಅನಿಲ್, ಖಜಾಂಚಿ ಟಿ.ಕೆ.ಮಹೇಶ್ ಮೆನನ್, ಸದಸ್ಯರಾದ ಟಿ.ಕೆ.ರಘು, ಜಲೇಂದ್ರ, ಉತ್ತಮ್, ಚೇತನ್, ಟಿ.ರಾಜನ್ ಇದ್ದರು.