ಅತ್ತಿಮಂಗಳ ಸಮೀಪ ರಸ್ತೆ ಬದಿಯಲ್ಲಿ ಬೃಹತ್ ಪ್ರಾಣಿಯ ಮೂಳೆ, ಚರ್ಮ ಹಾಗೂ ಇತರ ತ್ಯಾಜ್ಯ ಅವಶೇಷಗಳನ್ನು ತುಂಬಿದ ಪ್ಲಾಸ್ಟಿಕ್ ಚೀಲಗಳು
ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 4ನೇ ವಾರ್ಡ್‌ನ ಅತ್ತಿಮಂಗಳ ಸಮೀಪ ರಸ್ತೆ ಬದಿಯಲ್ಲಿ ಬೃಹತ್ ಪ್ರಾಣಿಯ ಮೂಳೆ, ಚರ್ಮ ಹಾಗೂ ಇತರ ತ್ಯಾಜ್ಯ ಅವಶೇಷಗಳನ್ನು ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ದುಷ್ಕರ್ಮಿಗಳು ತಂದು ಎಸೆದಿರುವುದು ಬೆಳಕಿಗೆ ಬಂದಿದೆ.
ನೀರಿನ ಟ್ಯಾಂಕ್ ಸಮೀಪದಲ್ಲೇ ತ್ಯಾಜ್ಯವನ್ನು ಬಿಸಾಡಲಾಗಿದ್ದು, ತೀವ್ರ ದುರ್ವಾಸನೆ ಹರಡುತ್ತಿದೆ. ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಪ್ರಾಣಿಯ ಅವಶೇಷಗಳು ಕಂಡುಬಂದಿದ್ದು, ಇದು ಗೋವಿನದ್ದೋ ಅಥವಾ ಕಾಡುಕೋಣದ್ದೋ ಎಂಬ ಅನುಮಾನ ವ್ಯಕ್ತವಾಗಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಪೊಲೀಸರು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಪ್ರಾಣಿಯ ಕಳೇಬರ ಮತ್ತು ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ನಿಗಾ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.