ಸೋಮವಾರಪೇಟೆ ತಹಸೀಲ್ದಾರ್ ಕಚೇರಿಯಲ್ಲಿ ಕೊಡಗು ಲೋಕಾಯುಕ್ತ ನಿರೀಕ್ಷಕರಾದ ವೀಣಾ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೃಷ್ಣಮೂರ್ತಿ ಇದ್ದರು.  
ಕೊಡಗು

ಮೌಖಿಕ ಹೇಳಿಕೆ ದೂರೆಂದು ಪರಿಗಣಿಸಲಾಗಲ್ಲ

ಪ್ರಮುಖ ಮುಖ್ಯಾಂಶಗಳು

  • ಲೋಕಾಯುಕ್ತ ಇನ್‌ಸ್ಪೆಕ್ಟರ್ ವೀಣಾ ಹೇಳಿಕೆ
  • ಸೋಮವಾರಪೇಟೆಯಲ್ಲಿ ತಕರಾರು ಅರ್ಜಿ ಸ್ವೀಕಾರ
ಸೋಮವಾರಪೇಟೆ: ಸಾರ್ವಜನಿಕರು ದೂರು ಸಲ್ಲಿಸುವಾಗ ಸಮರ್ಪಕ ದಾಖಲೆ ಇಟ್ಟುಕೊಳ್ಳಬೇಕು. ಸಲ್ಲಿಸಿದ ಅರ್ಜಿ ವಿಲೇವಾರಿಯಾಗದಿರುವ ಕುರಿತು ಸಮರ್ಪಕ ಮಾಹಿತಿ ಒದಗಿಸಬೇಕು ಎಂದು ಲೋಕಾಯುಕ್ತ ನಿರೀಕ್ಷಕರಾದ ವೀಣಾ ಹೇಳಿದರು.
ಕೊಡಗು ಲೋಕಾಯುಕ್ತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರಿಂದ ಲೋಕಾಯುಕ್ತ ಕಾಯ್ದೆಯಡಿ ದೂರು ಅರ್ಜಿ ಸ್ವೀಕರಿಸಿ ಮಾತನಾಡಿ, ಮೌಖಿಕ ಹೇಳಿಕೆ ದೂರುಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಲಿಖಿತ ಹಾಗೂ ಸ್ಪಷ್ಟವಾದ ಮಾಹಿತಿ ನೀಡಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ವೈಯಕ್ತಿಕ ಆರೋಪ ಮಾಡಬಾರದು. ಸಮರ್ಪಕ ದಾಖಲೆ ನೀಡಿದರೆ ಕ್ರಮಕೈಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ತಾಲೂಕಿನ ಮುಳ್ಳೂರು ಕೆರೆಯ ಜಾಗ ಒತ್ತುವರಿ, ನೇರುಗಳಲೆ ಪಂಚಾಯಿತಿ ವ್ಯಾಪ್ತಿಯ ಯಲಕನೂರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆ, ಸ್ಮಶಾನ ಜಾಗ ಕಾಯ್ದಿರಿಸುವಿಕೆ, ಕಾಫಿ ಪಲ್ಪರ್ ನೀರನ್ನು ಹೊಳೆಗೆ ಬೀಡುತ್ತಿರುವ ಕುರಿತು ದೂರುಗಳು ಸಲ್ಲಿಕೆಯಾಗಿದ್ದು, ಬಹುತೇಕ ದೂರುಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಗೆ ಸಂಬಂಧಿಸಿವೆ.
ಜಾಗ ದುರಸ್ತಿಗೆ ಸಂಬಂಧಿಸಿದಂತೆ ಕಾಫಿ ಬೆಳೆಗಾರ ಬಗ್ಗನ ಅನಿಲ್ ಕುಮಾರ್ ಮಾತನಾಡಿ, 2018ರ ಹದ್ದುಬಸ್ತು ಸರ್ವೇಗೆ ಸಂಬಂಧಪಟ್ಟಂತೆ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಹದ್ದುಬಸ್ತು ಸರ್ವೇಗೆ ಆಗ್ರಹಿಸಲಾಗಿತ್ತು. ಆದರೆ, ಸರ್ಕಾರದ ಆದೇಶವನ್ನು ಮೀರಿ ಇಬ್ಬರಿಗೆ ಮಾತ್ರ ದುರಸ್ತಿ ಮಾಡಿಕೊಟ್ಟಿದ್ದಾರೆ. 6 ಜನರ ಕಡತಗಳನ್ನು ಇಲಾಖೆಯಲ್ಲಿ ಬಾಕಿಯಾಗಿವೆ. ಬ್ರೋಕರ್ ಮೂಲಕ ಸಲ್ಲಿಕೆಯಾಗುವ ಅರ್ಜಿಗಳು ವಿಲೇವಾರಿವಾಗುತ್ತಿದೆ. ಅಧಿಕಾರಿಗಳಿಗೆ ಕೈಬಿಸಿ ಮಾಡಿದ ಅರ್ಜಿಗಳಿಗೆ ಮುಕ್ತಿ ಸಿಗುತ್ತಿದೆ ಎಂದು ಅರೋಪಿಸಿದರು. ಲಿಖಿತ ದೂರು ಸಲ್ಲಿಸುವಂತೆ ಅಧಿಕಾರಿ ತಿಳಿಸಿದರು.
ಯಲಕನೂರು ಹೊಸಳ್ಳಿಯ ಕಲ್ಲುಕೋರೆಯಲ್ಲಿ ಸ್ಫೋಟ ನಿರಂತರವಾಗಿ ನಡೆಯುತ್ತಿದೆ. ಕಲ್ಲುಗಳು ಮನೆಯ ಮೇಲೆ ಬೀಳುತ್ತಿವೆ. ಗಣಿ ಮಾಲೀಕರು ಭಯದ ವಾತಾವರಣ ಸೃಷ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕಲ್ಲು ಕೋರೆ ಕಡೆ ಬರುತ್ತಿಲ್ಲ. ಬಡವರ ದೂರುಗಳು ಕಸದ ಬುಟ್ಟಿ ಸೇರುತ್ತಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೃಷಿಕ ಸೋಮಯ್ಯ ದೂರು ಸಲ್ಲಿಸಿದರು.
ನೇರುಗಳಲೆಯ ಕಲ್ಲು ಗಣಿಕಾರಿಕೆ ಸ್ಥಳದಲ್ಲಿ ನಡೆಯುವ ಭಾರಿ ಸ್ಫೋಟವನ್ನು ಚಿತ್ರೀಕರಿಸಿದ ಸಿಡಿಯನ್ನು ಅಲ್ಲಿನ ನಿವಾಸಿ ಶಿವಕುಮಾರ್ ಲೋಕಾಯುಕ್ತರಿಗೆ ನೀಡಿ, ಮನೆಯ ಮುಂಭಾಗಕ್ಕೆ ಕಲ್ಲುಗಳು ಬೀಳುತ್ತಿವೆ. ನಮ್ಮ ಕುಟುಂಬ ಸದಸ್ಯರು ಜೀವ ಭಯದಿಂದ ಬದುಕುತ್ತಿದ್ದೇವೆ ಎಂದು ದೂರಿದರು.
ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ನಾಲ್ಕು ವರ್ಷಗಳು ಕಳೆದರೂ ನಿವೃತ್ತಿ ವೇತನ ದೊರೆತಿಲ್ಲವೆಂದು ರವಿಕುಮಾರ್ ಮನವಿ ಮಾಡಿದರು.
ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
17 ದೂರುಗಳ ಸ್ವೀಕಾರ
ಲೋಕಾಯುಕ್ತ ನಿರೀಕ್ಷಕರಾದ ವೀಣಾ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 17 ಅರ್ಜಿಗಳು ಸಲ್ಲಿಕೆಯಾದವು. ಸೋಮವಾರಪೇಟೆ ತಾಲೂಕು ಕಚೇರಿಯ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಭೂಮಾಪನಾ ಇಲಾಖೆ, ಸೆಸ್ಕ್, ಅಬಕಾರಿ, ಪರಿಸರ, ಕೊಳಚೆ ನೀರು ನಿರ್ಮೂಲನಾ ಮಂಡಳಿ ಸೇರಿದಂತೆ ಹಲವು ಇಲಾಖೆಗಳ ಕಾರ್ಯವೈಖರಿಗಳ ವಿರುದ್ಧ ಕುರಿತು ಸಾರ್ವಜನಿಕರು ಅಹವಾಲು ಸಲ್ಲಿಸಿದರು.