ಸೋಮವಾರಪೇಟೆ: ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಕಲಾತ್ಮಕ ಸಿನಿಮಾವನ್ನು ಕೊಡಗಿನಲ್ಲಿ ಚಿತ್ರಿಕರಿಸಲಾಗುವುದು ಎಂದು ಚಿತ್ರ ನಿರ್ದೇಶಕಿ ಕೊಡಗಿನ ರೂಪಾ ಮೋಹನ್ ತಿಳಿಸಿದ್ದಾರೆ.
ಸೃಷ್ಟಿ ಸಿನಿಮಾಸ್ ಪ್ರೊಡಕ್ಷನ್ ವತಿಯಿಂದ ಕಾದಂಬರಿ ಆಧಾರಿತ ಚಿತ್ರ ಜೇನುಬೇಲಿ ಸಿನಿಮಾದ ಮುಹೂರ್ತ ಏ.6ರಂದು ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ಶಾಸಕ ಡಾ.ಮಂತರ್‌ಗೌಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗಿರಿಜನರ ಬಗೆಗಿನ ಪೂರ್ಣ ಪ್ರಮಾಣದ ಎರಡು ಗಂಟೆಯ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ಕೊಡಗಿನಲ್ಲೇ ನಡೆಯಲಿದೆ. ಗಿರಿಜನರ ಹಾಡಿಗಳಲ್ಲಿ ಅವಶ್ಯಕವಿರುವಷ್ಟು ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ. ಒಂದು ಹಾಡಿಗೆ ಗಿರಿಜನರೇ ನುಡಿಸುವ ಸಂಗೀತವನ್ನು ಅಳವಡಿಸಿಕೊಳ್ಳಲಾಗುತ್ತದೆ. ಕಾಡು ಮತ್ತು ಕಾಡುಪ್ರಾಣಿಗಳ ನಡುವಿನ ಅವರ ಒಡನಾಟವನ್ನು ಚಿತ್ರೀಕರಿಸುವ ಉದ್ದೇಶ ಹೊಂದಲಾಗಿದೆ. ವಿದೇಶದಲ್ಲೂ ಈ ಕಲಾತ್ಮಕ ಚಿತ್ರವನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಸುಮಾರು 70 ವರ್ಷಗಳಿಂದಲೂ ಗಿರಿಜನರು ಕಾಡಿನ ಸರಹದ್ದಿನಲ್ಲಿ ಬದುಕುತ್ತಿದ್ದಾರೆ. ಅವರ ಬದುಕು, ಅರೋಗ್ಯ, ಶಿಕ್ಷಣ, ಆಹಾರ ಪದ್ಧತಿ, ಅವರ ಸಂಪ್ರಾದಾಯಗಳು, ನೃತ್ಯ, ಆಚರಿಸುವ ಹಬ್ಬ-ಹರಿದಿನಗಳು ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.
ಕಥೆ ಮತ್ತು ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಹಾಯಕ ನಿರ್ದೇಶನ ಶರತ್ ಬಿಳಿನೆಲೆ, ಛಾಯಗ್ರಾಹಣ ಸಂದೀಪ್ ಹೊನ್ನಾಳಿ, ಅದ್ವಿಕ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಶಶಿಕಿರಣ್, ಐಶ್ಚರ್ಯಾ ಇದ್ದರು.