ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆ ಕಾರ್ಯಕ್ರಮದ ಅಡಿ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವಿ.ಪಿ.ಶಶಿಧರ್, ಡಾ.ಜೆ.ಸೋಮಣ್ಣ, ಎಸ್.ಎನ್.ರಾಜೇಂದ್ರ ಇತರರಿದ್ದರು. 
ಕೊಡಗು

ಜ್ಞಾನವೇ ವಿಮೋಚನೆಯ ಮೂಲಶಕ್ತಿ

ಆದರ್ಶ್. ಎಂ.ಕೆ.

ಪ್ರಮುಖ ಮುಖ್ಯಾಂಶಗಳು

  • ಜ್ಞಾನವೇ ವಿಮೋಚನೆಯ ಮೂಲಶಕ್ತಿ
  • ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್

ಕುಶಾಲನಗರ: ಓದು ಮತ್ತು ಬರವಣಿಗೆಯ ಪ್ರಸ್ತಾಪ ಬಂದಾಗ ನೆನಪಿಗೆ ಬರುವ ಮೊದಲ ಹೆಸರು ಡಾ.ಬಿ.ಆರ್.ಅಂಬೇಡ್ಕರ್. ಶಿಕ್ಷಣ ಮತ್ತು ನಿರಂತರ ಅಧ್ಯಯನವೇ ಅವರನ್ನು ಯುಗಪ್ರವರ್ತಕರನ್ನಾಗಿ ರೂಪಿಸಿತು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕನ್ನಡ ಭಾರತೀ ಪದವಿ ಪೂರ್ವ ಕಾಲೇಜು, ಕುಶಾಲನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆ ಕಾರ್ಯಕ್ರಮದ ಅಡಿ ಅಂಬೇಡ್ಕರ್ ಓದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಪುಸ್ತಕಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಓದುವ ಹವ್ಯಾಸ ಮತ್ತು ನಿರಂತರ ಕಲಿಕೆಯೇ ಅವರ ವ್ಯಕ್ತಿತ್ವದ ಶಕ್ತಿಯಾಗಿತ್ತು. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿ ಓದನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡರೆ, ಅವರ ಭವಿಷ್ಯ ಉಜ್ವಲವಾಗುವುದರ ಜೊತೆಗೆ ಸಮಾಜಕ್ಕೆ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರ ಜೀವನ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಬಾಳೆಲೆ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಮಾತನಾಡಿ, ಸರಿಯಾದ ಶೈಕ್ಷಣಿಕ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ, ಸಾಮಾಜಿಕ ಅಸಮಾನತೆ ಮತ್ತು ಅಸ್ಪೃಶ್ಯತೆಯ ನೋವನ್ನು ಅನುಭವಿಸಿ ಬೆಳೆದ ಅಂಬೇಡ್ಕರ್ ಅವರು ಅದಮ್ಯ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ವಿಶ್ವದ ಶ್ರೇಷ್ಠ ಚಿಂತಕರಾಗಿ ಬೆಳೆದರು. ಅವರ ಪ್ರತಿಭೆಯನ್ನು ಗುರುತಿಸಿದ ಬರೋಡಾ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ತೃತೀಯ ಅವರು ವಿದ್ಯಾರ್ಥಿವೇತನ ನೀಡಿದ ಪರಿಣಾಮ ಅಂಬೇಡ್ಕರ್ ಅವರು ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದರು ಎಂದು ಹೇಳಿದರು.
ಅಂಬೇಡ್ಕರ್ ಅವರ ಜೀವನವು ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನ, ಶಿಸ್ತು ಮತ್ತು ಗುರಿನಿಷ್ಠೆಗೆ ಮಾದರಿಯಾಗಿದೆ. ವೈಯಕ್ತಿಕ ದುಃಖಗಳ ನಡುವೆಯೂ ಶಿಕ್ಷಣದ ಗುರಿಯಿಂದ ಹಿಂದೆ ಸರಿಯದೆ, ಸಮಾಜದ ನೋವನ್ನು ತಮ್ಮದೆಂದು ಭಾವಿಸಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು ಎಂದು ತಿಳಿಸಿದರು.
ಜ್ಞಾನಾರ್ಜನೆಯೇ ವ್ಯಕ್ತಿ ಮತ್ತು ಸಮಾಜದ ವಿಮೋಚನೆಗೆ ಮೂಲಶಕ್ತಿ ಎಂಬ ಅವರ ನಂಬಿಕೆ ಇಂದಿಗೂ ಪ್ರಸ್ತುತವಾಗಿದೆ. ಸಂವಿಧಾನದ ಪ್ರಧಾನ ಶಿಲ್ಪಿಯಾಗಿ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಷ್ಠಾಪಿಸಿದ ಅವರು, ಮಹಿಳಾ ಸಬಲೀಕರಣಕ್ಕಾಗಿ ಹಿಂದೂ ಕೋಡ್ ಮಸೂದೆಯನ್ನು ಮಂಡಿಸಿದ್ದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಎನ್.ರಾಜೇಂದ್ರ, ಕನ್ನಡ ಜಾಗೃತಿ ಸಮಿತಿ ಸದಸ್ಯ ಲೋಕೇಶ್ ಸಾಗರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಶಾಂತಿ, ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಗೇಂದ್ರ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಂಯೋಜಕ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹೈಸ್ಕೂಲ್ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಕುರಿತ ಕವನ ವಾಚನ, ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.