ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಟಿ.ಜಿ. ಪ್ರೇಮಕುಮಾರ್, ಕೆ.ಎಸ್. ರಾಜಾಚಾರಿ, ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ ಇದ್ದರು. 
ಕೊಡಗು

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಅಂಬೇಡ್ಕರ್ ಜಯಂತಿ

ಕುಶಾಲನಗರ:
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಕೇವಲ ಒಬ್ಬ ವ್ಯಕ್ತಿಯಾಗಿರದೆ, ಇಡೀ ಸಮಾಜದ ಶಕ್ತಿಯಾಗಿದ್ದರು. ಅವರ ಶಿಕ್ಷಣ, ಸಂಘಟನೆ, ಹೋರಾಟ ಎಲ್ಲರಿಗೂ ಮಾದರಿಯಾದುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಕುಶಾಲನಗರ ತಾಲೂಕು ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ
ಏರ್ಪಡಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಡಾ. ಅಂಬೇಡ್ಕರ್‌ರAತಹ ಮಹಾನ್ ಪುರುಷರ ವೈಚಾರಿಕ ಚಿಂತನೆಗಳು ಶೋಷಿತರಿಗೆ ಪ್ರೇರಣೆ, ಸ್ಫೂರ್ತಿಯಾಗಬೇಕೆಂಬ ನೆಲೆಗಟ್ಟಿನಲ್ಲಿ ಇಂತಹ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಶಿಕ್ಷಣ-ಸಂಘಟನೆ-ಹೋರಾಟ ಎನ್ನುವುದು ಅಂಬೇಡ್ಕರ್ ಅವರು ಶೋಷಿತ, ಹಿಂದುಳಿದ ಜಾತಿ ಸಮುದಾಯಗಳಿಗೆ ಕೊಟ್ಟ ಮಂತ್ರವಾಗಿದೆ. ಈ ಮೂರೂ ಮಂತ್ರಗಳ ಮೂಲಕ ಶೋಷಿತ ಜಾತಿ ಸಮುದಾಯಗಳು ಶಿಕ್ಷಣ ಪಡೆದು ದೊಡ್ಡ ಸಂಘಟನೆ ಮಾಡಿಕೊಳ್ಳುವ ಮೂಲಕ ಹೋರಾಟದ ಹಾದಿಯಲ್ಲಿ ತಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಅಂಬೇಡ್ಕರ್ ಅವರ ಘೋಷಣೆಗಳಾದ ಶಿಕ್ಷಣ, ಸಂಘಟನೆ, ಹೋರಾಟ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಡಾ ಬಿ.ಆರ್. ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ಮಾಹಿತಿ ನೀಡಿದ ಶಾಲಾ ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ. ಗೀತಾ ಜಾತಿ ವ್ಯವಸ್ಥೆಯಿಂದ ಅನ್ಯಾಯ, ಅಪಮಾನ, ಶೋಷಣೆಗೆ ಒಳಪಟ್ಟ ಎಲ್ಲ ಜನಾಂಗಗಳವರು ಸಂಘಟಿತರಾಗಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟವನ್ನು ಮೂಲಮಂತ್ರವಾಗಿಸಿಕೊಳ್ಳಬೇಕು ಎಂದು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸುವ ಮೂಲಕ ಶೋಷಿತರ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿದರು. ಪ್ರತಿಯೊಬ್ಬರೂ ಸ್ವಾಭಿಮಾನಿಗಳಾಗಲು ಶಿಕ್ಷಣ ಬಹಳ ಮುಖ್ಯ ಎಂದರು.
ಶಾಲಾ ಎಸ್‌ಡಿಎಂಸಿ ಸಲಹಾ ಸಮಿತಿಯ ಸದಸ್ಯ ಕೆ.ಎಸ್. ರಾಜಾಚಾರಿ, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್. ಸುಜಾತ, ಬಿ.ಎಸ್. ಅನ್ಸಿಲಾ ರೇಖಾ, ಗೈಡ್ಸ್ ಶಿಕ್ಷಕಿ ಕೆ.ಟಿ.ಸೌಮ್ಯ, ಹಿರಿಯ ವಿದ್ಯಾರ್ಥಿ ರತೀಶ್, ವಿದ್ಯಾರ್ಥಿಗಳು ಇದ್ದರು. ಇದೇ ವೇಳೆ ಡಾ ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಲಾಯಿತು.