ತಪೋಕ್ಷೇತ್ರ ಮನೆಹಳ್ಳಿ ಮಠದ ಜಾತ್ರಾ ಉತ್ಸವಕ್ಕೆ ಚಾಲನೆ ನೀಡುತ್ತಿರುವ ಮಹಾಂತ ಶಿವಲಿಂಗ ಸ್ವಾಮೀಜಿ ಹಾಗೂ ಭಕ್ತಾದಿಗಳು. 
ಕೊಡಗು

ಆಲೂರು ಸಿದ್ದಾಪುರ ಮನೆಹಳ್ಳಿ ಮಠ ಜಾತ್ರೋತ್ಸವಕ್ಕೆ ಚಾಲನೆ

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ತಪೋಕ್ಷೇತ್ರ ಮನೆಹಳ್ಳಿ ಮಠದ ವತಿಯಿಂದ ಗುರುವಾರದಿಂದ ಮೂರು ದಿನ ನಡೆಯಲಿರುವ ಜಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಮನೆಹಳ್ಳಿ ಮಠದ ಆವರಣದಲ್ಲಿ ಗುರುವಾರ ಬೆಳಗ್ಗೆ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಕ್ಷೇತ್ರದ ಆರಾಧ್ಯ ದೇವರುಗಳಾದ ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳಿ, ಶ್ರೀ ಗುರುಸಿದ್ದವೀರೇಶ್ವರ ಹಾಗೂ ಶ್ರೀ ತಪೋವನೇಶ್ವರಿ ದೇವಿಗೆ ರುದ್ರಾಭಿಷೇಕ, ಅಷ್ಟೋತ್ತರ ನಂತರ ಮಹಾಮಂಗಳಾರತಿ ನೆರವೇರಿಸಿದರು. ಆನಂತರ ಕಲ್ಯಾಣಿ ಸಮೀಪ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ನಡೆಯಲಿದೆ.
ಮೂರು ದಿನಗಳು ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಪಾಲ್ಗೊಳ್ಳಲಿದ್ದಾರೆ. ಏ.4ರ ಶನಿವಾರ ಮಧ್ಯಾಹ್ನ 3 ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಆಗಮಿಸಲಿದ್ದಾರೆ. ಸಂಜೆ 7 ಗಂಟೆಗೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಹಾ ರಥೋತ್ಸವ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.