ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ 2003-04ರ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ಒಟ್ಟು ಸೇರಿದ್ದರು. ಗುರುಗಳಾದ ಶ್ರೀಧರ್ ಆರಾಧ್ಯ, ಶಂಕರಯ್ಯ, ರೇವತಿ, ರಾಜಸುಂದರA, ಸವಿತಾ ರಾಜಸುಂದರA, ಸೋಮಯ್ಯ, ಸತೀಶ್, ಮಂಜುಳ ಶ್ರೀಧರ್ ಆರಾಧ್ಯ ಹಾಗೂ ಪಾಲಾಕ್ಷ ಇದ್ದರು.
ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ 2003-04ರ ಸಾಲಿನಲ್ಲಿ 10ನೇ ತರಗತಿ ಮುಗಿಸಿ ಹೊರಬಂದಿದ್ದ ಹಳೇ ವಿದ್ಯಾರ್ಥಿಗಳ ಬಳಗದ ಪುನರ್ಮಿಲನ ಕಾರ್ಯಕ್ರಮ ಭಾನುವಾರ ಇಲ್ಲಿನ ರೆಸಾರ್ಟ್ ಒಂದರಲ್ಲಿ ನಡೆಯಿತು. ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಒಂದೇ ತರಗತಿಯಲ್ಲಿ ಕಲಿತಿದ್ದವರು 22 ವರ್ಷಗಳ ಬಳಿಕ ಒಂದೆಡೆ ಸೇರಿ ಹಳೇ ನೆನಪುಗಳಲ್ಲಿ ಮಿಂದೆದ್ದರು. ಗುರುಗಳಾದ ಶ್ರೀಧರ್ ಆರಾಧ್ಯ, ಶಂಕರಯ್ಯ, ರೇವತಿ, ರಾಜಸುಂದರA, ಸವಿತಾ ರಾಜಸುಂದರA, ಸೋಮಯ್ಯ, ಸತೀಶ್, ಮಂಜುಳ ಶ್ರೀಧರ್ ಆರಾಧ್ಯ ಹಾಗೂ ಪಾಲಾಕ್ಷ ಕೂಡ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಶಿಷ್ಯರ ಸಾಧನೆಗಳಿಗೆ ಸಾಕ್ಷಿಯಾದರು.
ಈ ಸಂದರ್ಭ ಮಾತನಾಡಿದ ಶ್ರೀಧರ್ ಆರಾಧ್ಯ ಶಿಕ್ಷಕನಿಗೆ ತನ್ನ ಶಿಷ್ಯರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆದು ನಿಲ್ಲುವುದಕ್ಕಿಂತ ದೊಡ್ಡ ಗುರುದಕ್ಷಿಣೆ ಮತ್ತೊಂದಿಲ್ಲ. ಎರಡು ದಶಕಗಳು ಕಳೆದರೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡು ಈ ರೀತಿ ಗೌರವ ನೀಡುತ್ತಿರುವುದು ನಮ್ಮ ಜನ್ಮವನ್ನು ಸಾರ್ಥಕಗೊಳಿಸಿದೆ. ಮಾದಾಪುರದ ಮಣ್ಣಿನಲ್ಲಿ ನಾವು ಬಿತ್ತಿದ ಅಕ್ಷರ ಬೀಜಗಳು ಇಂದು ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಹಳೇ ವಿದ್ಯಾರ್ಥಿಯೂ ವೇದಿಕೆಯ ಮೇಲೆ ಬಂದು ತಮ್ಮ ಶಾಲಾ ದಿನಗಳ ನೆನಪುಗಳನ್ನು ಬಿಚ್ಚಿಡುತ್ತಿದ್ದರೆ ಇಡೀ ಸಭಾಂಗಣ ಒಮ್ಮೆ ನಗೆಗಡಲಲ್ಲಿ ತೇಲುತ್ತಿತ್ತು, ಮತ್ತೊಮ್ಮೆ ಭಾವನಾತ್ಮಕ ಮೌನಕ್ಕೆ ಶರಣಾಗುತ್ತಿತ್ತು. ಇದೇ ಸಂದರ್ಭ ವಿವಿಧ ಮೋಜಿನ ಆಟಗಳನ್ನು ಆಡುವ ಮೂಲಕ ಎಲ್ಲರೂ ಸಂಭ್ರಮಿಸಿದರು.