ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 7ನೇ ಹಳೇ ವಿದ್ಯಾರ್ಥಿಗಳ ಸಮಾವೇಶ ಕೋಡಾಕ್ ಸಂದರ್ಭ ವಾರ್ಷಿಕ ಬಹುಮಾನಗಳನ್ನು ವಿತರಿಸಲಾಯಿತು. ಕರ್ನಲ್ ಅಮರ್ ಜೀತ್ ಸಿಂಗ್, ದಿವ್ಯಾ ಸಿಂಗ್, ಶಫೀವುಲ್ಲಾ, ಮೊಹಮ್ಮದ್ ಶಾಜಿ ಮತ್ತಿತರರು ಇದ್ದರು. 
ಕೊಡಗು

ಕೂಡಿಗೆ ಕೊಡಗು ಸೈನಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಮಾವೇಶ

ಕುಶಾಲನಗರ:
ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ 7ನೇ ಹಳೇ ವಿದ್ಯಾರ್ಥಿಗಳ ಸಮಾವೇಶ ಕೋಡಾಕ್ ಶನಿವಾರ ನಡೆಯಿತು. ಶಾಲೆಯ ಹಳೇ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಬ್ಯಾಚ್‌ಗಳ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ದಿವ್ಯಾ ಸಿಂಗ್ ಮತ್ತು ಕೋಡಾಕ್ ಅಸೋಸಿಯೇಷನ್ ಅಧ್ಯಕ್ಷ ಶಫೀವುಲ್ಲಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಫೀವುಲ್ಲಾ ಸಂಸ್ಥೆಯೊAದಿಗಿನ ಬಾಂಧವ್ಯವನ್ನು ಬಲಪಡಿಸಲು ಮತ್ತು ಶಾಲೆಯ ಬೆಳವಣಿಗೆಗೆ ಹಳೇ ವಿದ್ಯಾರ್ಥಿಗಳ ಸಂಘ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ವಿವರಿಸಿದರು.
ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ಸಂಸ್ಥೆಯೊAದಿಗಿನ ಹಳೇ ವಿದ್ಯಾರ್ಥಿಗಳ ನಿರಂತರ ಸಂಬAಧವನ್ನು ಶ್ಲಾಘಿಸಿದರು. ಮಹಿಳಾ ಹಳೇ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸಲು ಸಂಘದ ಹೆಸರನ್ನು ಓಲ್ಡ್ ಬಾಯ್ಸ್ ಅಂಡ್ ಗರ್ಲ್ಸ್ ಅಸೋಸಿಯೇಷನ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮಂಡಿಸಿದರು. ಕೊಡಗು ಸೈನಿಕ ಶಾಲೆ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೈನಿಕ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯು ಚಾರಿತ್ರ‍್ಯ ನಿರ್ಮಾಣ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿದೆ. ಭಾರತೀಯ ನೌಕಾಪಡೆಯ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಸೆಪ್ಟೆಂಬರ್‌ನಲ್ಲಿ ಆಡಳಿತಾಧಿಕಾರಿಯಾಗಿ ಸೇರಲಿದ್ದಾರೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಡೆಟ್‌ಗಳು ಸುಮಧುರ ಗೀತಗಾಯನ, ರಾಮಾಯಣದ ಪ್ರಸಂಗಗಳನ್ನು ಬಿಂಬಿಸುವ ಆಕರ್ಷಕ ನೃತ್ಯ ಮತ್ತು ಚಂಡೆ ಮೇಳವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭವೂ ನಡೆಯಿತು. ಕರ್ನಲ್ ಅಮರ್ ಜೀತ್ ಸಿಂಗ್ ಅವರು 2025-26ನೇ ಸಾಲಿನ ಅಕಾಡೆಮಿಕ್ ಸಾಧನಾ ಟ್ರೋಫಿ, ಯುಪಿಎಸ್‌ಸಿ ಪರೀಕ್ಷೆಯ ಸಾಧನಾ ಟ್ರೋಫಿ ಮತ್ತು ಒಟ್ಟಾರೆ ಶ್ರೇಷ್ಠತೆಗಾಗಿ ಕಠಾರಿ ಹೌಸ್‌ಗೆ ಕಾಕ್ ಹೌಸ್ ಟ್ರೋಫಿಯನ್ನು ಪ್ರದಾನ ಮಾಡಿದರು. ಕೃತಜ್ಞತೆಯ ಸಂಕೇತವಾಗಿ ಶಫೀವುಲ್ಲಾ ಅವರು ಪ್ರಾಂಶುಪಾಲರಿಗೆ ಸ್ಮರಣಿಕೆಯನ್ನು ನೀಡಿದರು. ನಿವೃತ್ತ ಸಮಾಜ ವಿಜ್ಞಾನ ಶಿಕ್ಷಕ ದಕ್ಷಿಣಾಮೂರ್ತಿ ಮತ್ತು ಆಗಸ್ಟ್ನಲ್ಲಿ ನಿವೃತ್ತರಾಗಲಿರುವ ಸಾಮಾನ್ಯ ನೌಕರ ಮಲ್ಲಿಕಾರ್ಜುನ್ ಅವರ ಸೇವೆಯನ್ನು ಗುರುತಿಸಿ ಹಳೇ ವಿದ್ಯಾರ್ಥಿಗಳ ಸಂಘ ಸನ್ಮಾನಿಸಿತು. ಪ್ರಾಂಶುಪಾಲರು ಕೋಡಾಕ್‌ನ ಪದಾಧಿಕಾರಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಹಳೇ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಸುನಿಲ್ ಕರಳೆ, ಶಾಲೆಗೆ ದಕ್ಷಿಣಾಮೂರ್ತಿ ಮತ್ತು ಮಲ್ಲಿಕಾರ್ಜುನ್ ನೀಡಿದ ಕೊಡುಗೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು. ಹಳೇ ವಿದ್ಯಾರ್ಥಿಗಳು ಮತ್ತು ಶಾಲಾ ತಂಡಗಳ ನಡುವೆ ನಡೆದ ಸೌಹಾರ್ದ ಫುಟ್‌ಬಾಲ್ ಮತ್ತು ಹಾಕಿ ಪಂದ್ಯ ಗಮನ ಸೆಳೆಯಿತು. ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಎನ್. ವಿಬಿನ್ ಕುಮಾರ್, ಬೋಧಕ ಮತ್ತು ಆಡಳಿತ ಸಿಬ್ಬಂದಿ, ಎನ್‌ಸಿಸಿ ಪಿಐ ಸಿಬ್ಬಂದಿ ಮತ್ತು ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.