ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನಗಂಗಾ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸೂದನ ರಾಘವಯ್ಯ ದತ್ತಿ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಸಾಧಕಿ ನವ್ಯಾಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಂ.ಪಿ. ಕೇಶವ ಕಾಮತ್, ಟಿ.ಕೆ. ಸುಧೀರ್, ಮೆ.ನಾ. ವೆಂಕಟನಾಯಕ್, ಟಿ.ಜಿ. ಪ್ರೇಮಕುಮಾರ್, ಸೂದನ ರತ್ನಾವತಿ, ಜೆ.ಎ. ಸಂಜನಾ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನೊಂದಿಗೆ ನಾಡು-ನುಡಿ, ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವ ಮೂಲಕ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಹೇಳಿದರು. ಹಾರಂಗಿ ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಮಂಗಳವಾರ ಜಿಲ್ಲಾ ಹಾಗೂ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನಗಂಗಾ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸೂದನ ರಾಘವಯ್ಯ ದತ್ತಿ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಸೃಜನಶೀಲತೆ ಹೆಚ್ಚಳ ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ನೆರವಾಗುತ್ತದೆ. ಗ್ರಂಥಾಲಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಮಾನಸಿಕ ನೆಮ್ಮದಿ ಮತ್ತು ಕ್ರಿಯಾಶೀಲತೆ ಲಭಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜ್ಞಾನಗಂಗಾ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಟಿ.ಕೆ. ಸುಧೀರ್, ನಿರಂತರ ಕಲಿಕೆ, ಸತತ ಅಭ್ಯಾಸ, ನಿರ್ದಿಷ್ಟ ಗುರಿ ಹಾಗೂ ಕಠಿಣ ಪರಿಶ್ರಮವಿದ್ದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕುರಿತು ಉಪನ್ಯಾಸ ನೀಡಿದ ಹೆಬ್ಬಾಲೆ ಪ್ರೌಢಶಾಲೆಯ ಶಿಕ್ಷಕ ಮೆ.ನಾ. ವೆಂಕಟನಾಯಕ್, ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಸರ್ ಸಿ.ವಿ. ರಾಮನ್, ಎ.ಪಿ.ಜೆ. ಅಬ್ದುಲ್ ಕಲಾಂ, ಎಂ. ವಿಶ್ವೇಶ್ವರಯ್ಯ ಅವರಂತಹ ಸಾಧಕರು ವಿದ್ಯಾರ್ಥಿಗಳಿಗೆ ಆದರ್ಶ. ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕೇ ವಿನಃ ಕಷ್ಟಪಟ್ಟು ಓದಬಾರದು. ಏಕಾಗ್ರತೆ ಹಾಗೂ ಓದುವ ಛಲವಿದ್ದರೆ ಪರೀಕ್ಷೆಯನ್ನು ಯಾವುದೇ ಆತಂಕವಿಲ್ಲದೆ ಎದುರಿಸಬಹುದು ಎಂದರು.
ಜ್ಞಾನಗಂಗಾ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್, ಎಸ್‌ಬಿಐ ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ತಾಲೂಕು ಕಸಾಪ ಕೋಶಾಧಿಕಾರಿ ಕೆ.ವಿ. ಉಮೇಶ್, ಶಾಲೆಯ ಪ್ರಾಂಶುಪಾಲೆ ಜೆ.ಎ. ಸಂಜನಾ, ಕನ್ನಡ ಶಿಕ್ಷಕ ಎಚ್. ಭಾಸ್ಕರ್, ಸಂಗೀತ ಶಿಕ್ಷಕಿ ರತ್ನಾವತಿ, ಜಲಾವತಿ, ಎಸ್‌ಎಸ್‌ಎಲ್‌ಸಿ ಸಾಧಕಿ ನವ್ಯಾಳ ಪೋಷಕರಾದ ಕೃಷ್ಣಪ್ಪ ಮತ್ತು ಕವಿತಾ ಇದ್ದರು.
2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ. 98.77 ಅಂಕಗಳೊAದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶನಿವಾರಸಂತೆಯ ವಿಘ್ನೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಎಚ್.ಕೆ. ನವ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನವ್ಯ, ತಮ್ಮ ಉತ್ತಮ ಸಾಧನೆಗೆ ಕಾರಣರಾದ ಶಾಲಾ ಶಿಕ್ಷಕರು ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಜಿಲ್ಲಾ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಜ್ಞಾನಗಂಗಾ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಉನ್ನತ್ ಸಾರಥ್ಯ ಅವರನ್ನು ಅಭಿನಂದಿಸಲಾಯಿತು.