ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಾರಂಡ ವಿಠಲ ನಂಜಪ್ಪ ಅವರ ಬಹುರೂಪಿ ಕೃತಿ ಬಿಡುಗಡೆ ಮಾಡಲಾಯಿತು. ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮನೆಯಪಂಡ ಎ. ಪೊನ್ನಪ್ಪ, ಟಿ. ರಂಗಪ್ಪ, ಬಿ.ಆರ್. ರಂಗಸ್ವಾಮಿ, ಕಲ್ಲುಮಾಡಂಡ ಸರಸ್ವತಿ ಇದ್ದರು. 
ಕೊಡಗು

ಅಲ್ಲಾರಂಡ ವಿಠಲ ಅವರ ಬಹುರೂಪಿ ಬಿಡುಗಡೆ

ಸುನಿಲ್ ಪೊನ್ನೇಟಿ
ಮಡಿಕೇರಿ:
ಈಗ ನಾವು ವ್ಯತಿರಿಕ್ತವಾದ, ವ್ಯತ್ಯಸ್ಥವಾದ ಹಾಗೂ ವಿರೋಧಾಭಾಸಗಳಿಂದ ಕೂಡಿದ ಪ್ರಪಂಚದಲ್ಲಿ ಬದುಕುತ್ತಿದ್ದೇವೆ ಎಂದು ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಭಿಪ್ರಾಯಪಟ್ಟರು. ಅಲ್ಲಾರಂಡ ರಂಗಚಾವಡಿ, ಸಿರಿಗನ್ನಡ ವೇದಿಕೆ, ಚಕೋರ ಕೊಡಗು ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಈಚೆಗೆ ಇಲ್ಲಿನ ಗಾಂಧಿ ಭವನದಲ್ಲಿ ಅಲ್ಲಾರಂಡ ವಿಠಲ ನಂಜಪ್ಪ ಅವರ ಕೃತಿ ಬಹುರೂಪಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಹುರೂಪಿ ಕೃತಿಯಲ್ಲಿನ ಹಲವು ವಿಚಾರಗಳು ಚಿಂತನೆಗೆ ಹಚ್ಚುತ್ತವೆ. ಅನೇಕ ಧ್ವನಿಪೂರ್ಣ ಮಾತುಗಳನ್ನು ಲೇಖಕರು ಬಳಸಿದ್ದಾರೆ. ಪುಸ್ತಕದ ಭಾಷೆ ಕಾವ್ಯಭಾಷೆಯಂತಿದೆ. ಈ ಪುಸ್ತಕ ಓದಿದರೆ ಲೇಖಕ ಅಲ್ಲಾರಂಡ ವಿಠಲ ನಂಜಪ್ಪ ಅವರ ಪ್ರಖರ ಚಿಂತನೆಗಳ ಅರಿವು ದಕ್ಕುತ್ತದೆ ಎಂದರಲ್ಲದೆ ಸಮಕಾಲೀನ ಸಂದರ್ಭದ ತವಕ, ತಲ್ಲಣಗಳನ್ನು ಸಾಹಿತ್ಯಾಸಕ್ತರ ಮುಂದಿಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ. ಪೊನ್ನಪ್ಪ ಮಾತನಾಡಿ ನಿತ್ಯವೂ ಪುಸ್ತಕ ಓದಿದರೆ ಆರೋಗ್ಯ ಚೆನ್ನಾಗಿರುತ್ತದೆ. ಬಹುರೂಪಿ ಪುಸ್ತಕದಲ್ಲಿ 20 ಲೇಖನಗಳು ಚರ್ಚೆಯಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ಅವುಗಳು ಜನರಿಗೆ ತಲುಪುವಂತಹ ವ್ಯವಸ್ಥೆ ಮಾಡಬೇಕು ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಿ. ರಂಗಪ್ಪ ಮಾತನಾಡಿ ಪುಸ್ತಕದಲ್ಲಿರುವ ಲೇಖನಗಳು ಕ್ಷೇತ್ರ ಅಧ್ಯಯನದ ಮೂಲಕ ಬರೆದವುಗಳಾಗಿವೆ. ವಾಸ್ತವಕ್ಕೆ ಹತ್ತಿರದಲ್ಲಿವೆ ಎಂದು ಸವಿಸ್ತಾರವಾಗಿ ಪುಸ್ತಕ ಕುರಿತು ಮಾತನಾಡಿದರು. ವಕೀಲ ಬಿ.ಆರ್. ರಂಗಸ್ವಾಮಿ ಮಾತನಾಡಿ ಅಲ್ಲಾರಂಡ ವಿಠಲ ನಂಜಪ್ಪ ಅವರದ್ದು ತೀಕ್ಷ÷್ಣವಾದ ಬರವಣಿಗೆ. ಎಲ್ಲರಿಗೂ ದಕ್ಕುವ ವ್ಯಕ್ತಿ ಅವರು ಎಂದು ಹೇಳಿದರು.
ಸಾಹಿತಿ ನಾಗೇಶ ಕಾಲೂರು, ಕಲ್ಲುಮಾಡಂಡ ಸರಸ್ವತಿ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸ್ಥಾಪಕ ಅಧ್ಯಕ್ಷ ಚೆಂಬಾAಡ ಶಿವಿ ಭೀಮಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹಾಗೂ ಉದ್ಯಮಿ ಉಣ್ಣಿಕೃಷ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಂಗಭೂಮಿ ಕಲಾವಿದ ಭರಮಣ್ಣ ಬೆಟ್ಟಗೇರಿ ಅವರು ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕದ ‘ಶರಣು ಹೇಳೇನ್ರಿ ಸ್ವಾಮಿ ನಾವು ನಿಮಗ ಸದ್ದು ಗದ್ದಲ ಮಾಡಬ್ಯಾಡ್ರಿ ಆಟದೊಳಗ...’ ರಂಗಗೀತೆ ಹಾಡಿದರು. ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಗಾಯನ ಗಮನ ಸೆಳೆಯಿತು. ಉದಿಯಂಡ ಜಯಂತಿ ಮಂದಣ್ಣ ಮತ್ತು ಬೊಟ್ಟೋಳಂಡ ನಿವ್ಯ ಸಾಧಕರನ್ನು ಪರಿಚಯಿಸಿದರು. ರಂಜಿತ್ ಕವಲಪಾರ ಇದ್ದರು.