ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಲ್ಲಿ ಆರಂಭವಾಗಿರುವ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಅಟಿಕ್)
ಕೊಡಗು ಮತ್ತು ಅಕ್ಕಪಕ್ಕದ ಪ್ರಗತಿಪರ ಕೃಷಿಕರಿಗೆ ವೈವಿಧ್ಯಮ ಸೇವೆ ಕೊಡುತ್ತಾ ಜನಮನ್ನಣೆ ಗಳಿಸಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ರೈತರಿಗೆ ಈಗ ಮತ್ತಷ್ಟು ಹತ್ತಿರವಾಗಿದೆ. ಇಲ್ಲಿ ಈಗ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಅಟಿಕ್) ಶುರುವಾಗಿದ್ದು, ಕೃಷಿ ಮಾಹಿತಿ, ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಚೆಟ್ಟಳ್ಳಿ ಕೇಂದ್ರದ ಈ ಪ್ರಯತ್ನಕ್ಕೆ ಕೃಷಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕುಶಾಲನಗರ ತಾಲೂಕು ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಯೋಗಿಕ ಕೇಂದ್ರ ಕೃಷಿ ವಲಯದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿಯಲ್ಲಿ ಬರುವ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಒಂದು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿದೆ. ಚೆಟ್ಟಳ್ಳಿಯ ಈ ಕೇಂದ್ರವನ್ನು ಪ್ರಮುಖವಾಗಿ ಮಲೆನಾಡು ಮತ್ತು ಅರೆ-ಮಲೆನಾಡು ಪ್ರದೇಶದ ತೋಟಗಾರಿಕಾ ಬೆಳೆಗಳ ಸಂಶೋಧನೆ, ರೈತರಿಗೆ ತಂತ್ರಜ್ಞಾನ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಪ್ರಮುಖವಾಗಿ ಕೊಡಗಿನ ಕಿತ್ತಳೆ ಬಗ್ಗೆ ಇಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ನಡೆದಿದೆ.
ರೈತರು ಮತ್ತು ಕೃಷಿ ವಿಜ್ಞಾನಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಏಕಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಚೆಟ್ಟಳ್ಳಿಯ ಈ ಕೇಂದ್ರದ ಮೂಲಕ ರೈತರು ಎದುರಿಸುತ್ತಿರುವ ಕೀಟಬಾಧೆ, ರೋಗಗಳು ಮತ್ತು ಮಣ್ಣಿನ ಫಲವತ್ತತೆಯ ಸಮಸ್ಯೆಗಳಿಗೆ ಇಲ್ಲಿನ ವಿಜ್ಞಾನಿಗಳು ನೇರ ಪರಿಹಾರ ಮತ್ತು ಉಚಿತ ಸಲಹೆ ನೀಡುತ್ತಾರೆ. ಆಧುನಿಕ ಕೃಷಿ ಪದ್ಧತಿಗಳು, ಕಸಿ ಮಾಡುವ ವಿಧಾನಗಳು ಮತ್ತು ಬೆಳೆ ನಿರ್ವಹಣೆಯ ಕುರಿತಾದ ಪುಸ್ತಕಗಳು, ಕರಪತ್ರಗಳು ಹಾಗೂ ಸಿ.ಡಿಗಳು ಇಲ್ಲಿ ಲಭ್ಯವಿದೆ. ರೈತರಿಗೆ ನಂಬಿಕಸ್ಥ ಮತ್ತು ಅಧಿಕ ಇಳುವರಿ ನೀಡುವ ಸಸ್ಯ ಸಾಮಗ್ರಿಗಳನ್ನು ಒದಗಿಸುವುದು ಈ ಕೇಂದ್ರದ ಪ್ರಮುಖ ಆದ್ಯತೆಯಾಗಿದೆ.
ಹಣ್ಣಿನ ಗಿಡಗಳು ಪ್ರಮುಖವಾಗಿ ಕೊಡಗಿನ ಕಿತ್ತಳೆ, ಪ್ಯಾಷನ್ ಫ್ರೂಟ್, ರಾಂಬುಟನ್, ಆವಕಾಡೊ (ಬೆಣ್ಣೆಹಣ್ಣು), ಲಿಚ್ಚಿಯಂಥ ಲಘು ಉಷ್ಣವಲಯದ ಹಣ್ಣುಗಳ ಕಸಿ ಕಟ್ಟಿದ ಗಿಡಗಳು ಕೂಡ ಇಲ್ಲಿ ಸಿಗುತ್ತದೆ. ರೈತರ ಜಮೀನಿನ ಮಣ್ಣು ಮತ್ತು ನೀರನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಅದಕ್ಕೆ ತಕ್ಕಂತೆ ಯಾವ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬ ವರದಿಯನ್ನು ನೀಡಲಾಗುತ್ತದೆ. ಕೃಷಿಕರು, ಮಹಿಳಾ ಕೃಷಿಕರು ಮತ್ತು ಗ್ರಾಮೀಣ ಯುವಕರಿಗೆ ಕೃಷಿ ಆಧರಿತ ಸ್ವಯಂ ಉದ್ಯೋಗ ತರಬೇತಿಯೂ ಸಿಗುತ್ತದೆ.
ಜೇನುಸಾಕಣೆ, ಅಣಬೆ ಬೇಸಾಯ, ಹಣ್ಣುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ನರ್ಸರಿ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆ ಸಹಿತ ತರಬೇತಿ ಅಹ ಆಗಾಗ್ಗೆ ಹಮ್ಮಿಕೊಳ್ಳಲಾಗುತ್ತದೆ. ಈ ಕೇಂದ್ರ ಕೇವಲ ಮಾಹಿತಿ ಕೇಂದ್ರವಾಗಿರದೆ, ದೊಡ್ಡ ಸಂಶೋಧನಾ ಕೇಂದ್ರವೂ ಹೌದು. ವೈರಸ್ ಮುಕ್ತ ಕೊಡಗು ಕಿತ್ತಳೆ ಸಸಿಗಳನ್ನು ಉತ್ಪಾದಿಸುವಲ್ಲಿ ಈ ಕೇಂದ್ರದ ಕೊಡುಗೆ ಅಪಾರ. ಮಲೆನಾಡಿನ ವಾತಾವರಣಕ್ಕೆ ಒಗ್ಗಿಕೊಳ್ಳುವಂಥ ವಿದೇಶಿ ಹಣ್ಣುಗಳ ತಳಿಗಳ ಮೇಲೆ ಇಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಿರುತ್ತವೆ.
ಕೊಡಗು ಮಾತ್ರವಲ್ಲದೆ ಹಾಸನ, ಚಿಕ್ಕಮಗಳೂರು, ದಕ್ಷಿಣಕನ್ನಡ ಹಾಗೂ ಮೈಸೂರು ಜಿಲ್ಲೆಯ ಸಾವಿರಾರು ರೈತರು ಈ ಕೇಂದ್ರದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕೃಷಿಯಲ್ಲಿ ಆಧುನಿಕತೆ ಹಾಗೂ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಲು ಬಯಸುವವರಿಗೆ ಚೆಟ್ಟಳ್ಳಿಯ ತೋಟಗಾರಿಕೆ ಬೆಳೆಗಳ ಪ್ರಾಯೋಗಿಕ ಕೇಂದ್ರ ಅತ್ಯುತ್ತಮ ಸ್ಥಳವಾಗಿದ್ದು, ಕೆಲಸದ ದಿನಗಳಲ್ಲಿ ಇಲ್ಲಿ ತಜ್ಞರು ಲಭ್ಯವಿರುತ್ತಾರೆ. ಇದೀಗ ಈ ಕೇಂದ್ರದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಅಟಿಕ್) ಆರಂಭಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪರಿವರ್ತನೆಯ ಹೊಸ ವೇದಿಕೆಯಾಗಿ ಹೊರಹೊಮ್ಮಿರುವ ಈ ಕೇಂದ್ರದಲ್ಲಿ ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ವತಿಯಿಂದ ಅಭಿವೃದ್ಧಿಪಡಿಸಲಾದ ನೂತನ ಕೃಷಿ ತಂತ್ರಜ್ಞಾನಗಳು ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳು ರೈತರಿಗೆ ಲಭ್ಯವಾಗುತ್ತಿವೆ. ರೈತರಿಗೆ ಅಗತ್ಯವಾದ ಕೃಷಿ ಮಾಹಿತಿ, ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಉತ್ತಮ ಗುಣಮಟ್ಟದ ತರಕಾರಿ ಮತ್ತು ಹೂವಿನ ಬೀಜಗಳು, ಅರ್ಕಾ ಸೂಕ್ಷ್ಮಜೀವಿಗಳ ಮಿಶ್ರಣ, ವಿಶೇಷ ಗೊಬ್ಬರಗಳು, ಕೀಟನಾಶಕ ಲೇಪನ, ಡಿಕಂಪೋಸರ್ ಹಾಗೂ ಕೋಕೋಪಿಟ್ ಸೇರಿದಂತೆ ಅನೇಕ ಕೃಷಿ ಅವಶ್ಯಕ ವಸ್ತುಗಳು ಇಲ್ಲಿ ದೊರೆಯುತ್ತಿವೆ. ಇದರ ಜತೆಗೆ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ರೈತರ ಗಮನ ಸೆಳೆಯುತ್ತಿವೆ. ಹಲಸಿನ ಬೀಜದ ಚಾಕಲೇಟ್ ಮತ್ತು ಬಿಸ್ಕಟ್, ಬಾಳೆಹಣ್ಣಿನ ಪಾಸ್ತಾ, ಬಾಳೆಗಿಡದ ದಿಂಡಿನ ಜ್ಯೂಸ್, ಬಾಳೆ ಹಾಗೂ ಅಂಜೂರ ಮಿಶ್ರಣದ ಸಿಹಿ, ನೇರಳೆ ಹಣ್ಣಿನ ಬೈಟ್‌ಗಳು ಸೇರಿದಂತೆ ಹಲವು ಉತ್ಪನ್ನಗಳು ಕೃಷಿಗೆ ಹೊಸ ಆದಾಯದ ಮಾರ್ಗಗಳನ್ನು ತೋರಿಸಿಕೊಡುತ್ತಿದೆ.
ಕೇಂದ್ರದಲ್ಲಿ ಉತ್ಪಾದನೆಯಾಗುವ ಬೀಜಗಳು ಮತ್ತು ಸಸಿಗಳು ನೇರವಾಗಿ ರೈತರಿಗೆ ಲಭ್ಯವಾಗುವ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ಈ ಕೇಂದ್ರದ ಪ್ರಯೋಜನ ಇನ್ನಷ್ಟು ರೈತರಿಗೆ ಲಭ್ಯವಾಗುವಂತೆ ಆಗಲಿ ಎನ್ನುವುದು ಪ್ರಗತಿಪರ ಕೃಷಿಕರ ಆಶಯವಾಗಿದೆ.
"
ಕೃಷಿಕರ ಆದಾಯ ದುಪ್ಪಟ್ಟು ಆಗಬೇಕು ಎನ್ನುವ ಗುರಿ ಇಟ್ಟುಕೊಂಡು ನಮ್ಮ ಕೇಂದ್ರ ಕಾರ್ಯೋನ್ಮುಖವಾಗಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಬೀಜಗಳು ಮತ್ತು ಸಸಿಗಳು ನೇರವಾಗಿ ರೈತರಿಗೆ ಲಭ್ಯವಾಗಬೇಕು. ಮಧ್ಯವರ್ತಿಗಳ ಅವಲಂಬನೆ ಇರಬಾರದು ಎನ್ನುವ ಕಾರಣಕ್ಕೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರವನ್ನು ನಮ್ಮಲ್ಲಿ ಆರಂಭಿಸಲಾಗಿದೆ. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಇಲ್ಲಿ ಪಡೆಯಲು ಸಾಧ್ಯವಾಗುತ್ತಿದೆ. ಕೃಷಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇನ್ನೂ ಹೆಚ್ಚಿನ ಜನರಿಗೆ ಈ ಕೇಂದ್ರದ ಪ್ರಯೋಜನ ಲಭಿಸಿದರೆ ಆರಂಭಿಸಿದ್ದಕ್ಕೆ ಸಾರ್ಥಕತೆ ಬರುತ್ತದೆ.
— ಡಾ. ಬಿ.ಎಂ. ಮುರಳೀಧರ್, ಮುಖ್ಯಸ್ಥ, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಚೆಟ್ಟಳ್ಳಿ
"
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಆರಂಭವಾಗಿರುವುದರಿAದ ಜಿಲ್ಲೆಯ ಕೃಷಿಕರಿಗೆ ಹೆಚ್ಚಿನ ಪ್ರಯೋಜನ ಆಗಿದೆ. ಹಲವು ರೈತ ಸ್ನೇಹಿ ಕ್ರಮಗಳ ಮೂಲಕ ಕೃಷಿಕರ ಮೆಚ್ಚುಗೆ ಗಳಿಸಿರುವ ಈ ಕೇಂದ್ರಲ್ಲಿ ಅಟಿಕ್ ಶುರುಮಾಡಿರುವುದರಿಂದ ಕೃಷಿ ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ಬೆಂಗಳೂರಿನ ಅವಲಂಬನೆ ಕಡಿಮೆ ಆಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯದ ಉಳಿತಾಯ ಮಾತ್ರ ಆಗುವುದಲ್ಲದೆ ಹಣವೂ ಉಳಿಯುವಂತಾಗಿದೆ. ಇಲ್ಲಿ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಆರಂಭವಾಗಿರುವ ಬಗ್ಗೆ ಇನ್ನೂ ಹೆಚ್ಚಿನ ಕೃಷಿಕರಿಗೆ ಮಾಹಿತಿ ಲಭ್ಯವಾಗುವಂತೆ ಆಗಬೇಕು.
— ಪುತ್ತರಿರ ಕರುಣ್ ಕಾಳಯ್ಯ, ಕಾಫಿ ಬೆಳೆಗಾರ ಚೆಟ್ಟಳ್ಳಿ