ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಯಿಫಾ) ವತಿಯಿಂದ ಹೆಬ್ಬಾಲೆ ಗ್ರಾಮದ ಆದರ್ಶ್ ಅವರ ಗದ್ದೆಯಲ್ಲಿ 8ನೇ ವರ್ಷದ ಗದ್ದೆ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಬೆಂಗಳೂರು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನಾರಾಯಣ್ ಉದ್ಘಾಟಿಸಿದರು. ಡಾ. ಮಂತರ್ ಗೌಡ, ಎಂ.ಪಿ. ಅಪ್ಪಚ್ಚುರಂಜನ್, ಅರುಣ್ ಕೊತ್ನಳ್ಳಿ, ಶ್ರೀನಿಧಿ ಲಿಂಗಪ್ಪ ಮತ್ತಿತರರು ಇದ್ದರು. 
ಕೊಡಗು

ಕೃಷಿ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಬೇಕಿದೆ

ಕುಶಾಲನಗರ:
ಭೂಮಿ ನಮ್ಮ ತಾಯಿಯಾಗಿದ್ದು, ಕೃಷಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬೆಂಗಳೂರು ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನಾರಾಯಣ್ ಹೇಳಿದರು. ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಯಿಫಾ) ವತಿಯಿಂದ ಹೆಬ್ಬಾಲೆ ಗ್ರಾಮದ ಆದರ್ಶ್ ಅವರ ಗದ್ದೆಯಲ್ಲಿ ಶುಕ್ರವಾರ ಆಯೋಜಿಸಿದ್ದ 8ನೇ ವರ್ಷದ ಗದ್ದೆ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಗದ್ದೆ ನಾಟಿ ಕಾರ್ಯಕ್ರಮ ವಿಶೇಷವಾಗಿದ್ದು, ಎಲ್ಲರನ್ನು ಒಂದೆಡೆ ಸೇರಿಸಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಹಲವು ವರ್ಷಗಳ ಬಳಿಕ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿ ಆಗಿದೆ. ನಮ್ಮ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನು ಉಳಿಸಲು ಯಿಫಾ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ. ಕೇವಲ ಸಂಪಾದನೆಯ ಹಿಂದೆ ಓಡುವುದರಿಂದ ಬದುಕಿನಲ್ಲಿ ಭಾವನೆ ಹಾಗೂ ಕನಸುಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಭೂಮಿ ನಮ್ಮ ತಾಯಿ. ಆಕೆಯನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರಗಳು ಇನ್ನಷ್ಟು ಗಮನಹರಿಸಬೇಕಿದೆ. ಗ್ರಾಮೀಣ ಭಾಗಗಳಲ್ಲಿ ಉತ್ತಮ ಇಂಟರ್‌ನೆಟ್ ಹಾಗೂ ಗುಣಮಟ್ಟದ ವಿದ್ಯುತ್ ಸೌಲಭ್ಯ ಕಲ್ಪಿಸಿದರೆ, ಇಲ್ಲಿಯೇ ಕುಳಿತು ವಿಶ್ವಕ್ಕೆ ಸೇವೆ ಸಲ್ಲಿಸುವ ಅವಕಾಶವಿದೆ. ಯುವಜನರು ವಲಸೆ ಹೋಗದಂತೆ ಸ್ಥಳೀಯವಾಗಿಯೇ ಕೈಗಾರಿಕೆಗಳು ಹಾಗೂ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಗ್ರಾಮೀಣ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿದೆ. ನಿಮ್ಮ ಜಮೀನು ನಿಮ್ಮಲ್ಲೇ ಇರಲಿ, ನಿಮ್ಮ ಸಂಸ್ಕೃತಿಯೂ ನಿಮ್ಮಲ್ಲೇ ಉಳಿಯಲಿ. ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವವರಿಗೆ ಯಾವುದೇ ಅವಕಾಶ ನೀಡಬೇಡಿ ಎಂದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡದೆ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ಕೃಷಿ ಪರಂಪರೆಯನ್ನು ಉಳಿಸಬೇಕು. ಕೃಷಿ ಭೂಮಿ ಕೇವಲ ಆದಾಯದ ಮೂಲವಲ್ಲ. ಅದು ನಮ್ಮ ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆಯ ಪ್ರಮುಖ ಆಧಾರವಾಗಿದೆ. ಆದ್ದರಿಂದ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ನಿಯಂತ್ರಿಸಿ, ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯ ಮುಂದುವರಿಸುವAತೆ ಪ್ರೋತ್ಸಾಹಿಸಬೇಕು. ಕೊಡಗಿನ ಕೃಷಿ ಪದ್ಧತಿ, ಪರಿಸರ ಹಾಗೂ ಇಲ್ಲಿನ ವಿಶಿಷ್ಟ ಕೃಷಿ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೃಷಿ ಭೂಮಿಯನ್ನು ಸಂರಕ್ಷಿಸುವ ಮೂಲಕ ಜಿಲ್ಲೆಯ ಕೃಷಿ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಯಿಫಾ ಸಂಘಟನೆ ಮಾಡಿರುವ ಸೇವೆ ಅಪಾರವಾಗಿದೆ. ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ. ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಕೊಡಗಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕೊಡಗಿನ ಶುದ್ಧ ಗಾಳಿ ಮತ್ತು ನೀರು ಬೇರೆಲ್ಲೂ ಸಿಗುವುದಿಲ್ಲ ಮುಂದೆಯೂ ಅದನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಕೊಡಗಿಗೆ ಮಾರಾಕವಾಗಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಯಾದರೆ ಸಾಲದು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ವರದಿ ತಿರಸ್ಕಾರ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ಸಂಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ 2018ರಿಂದ ನಿರಂತರವಾಗಿ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಯುವಜನರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಕೃಷಿ ಸಂಸ್ಕೃತಿಯೊAದಿಗೆ ಅವರ ನಂಟನ್ನು ಬೆಸೆಯುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಯುವಜನರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮತ್ತು ಉತ್ತೇಜನ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಎಂದರು.
ವೇದಿಕೆಯಲ್ಲಿ ಯಿಫಾ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಎರೋನಿಕ್ಸ್ ಹೆಚ್‌ವಿಎಸಿ ಮಾಲೀಕ ಕೀರ್ತಿ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಹೆಚ್.ಎಸ್. ರಾಜಶೇಖರ್, ನಿವೃತ್ತ ಸೇನಾ ಸಿಬ್ಬಂದಿ ಪುಟ್ಟೇಗೌಡ, ಬಿಜೆಪಿ ಮುಖಂಡ ಚಂದ್ರಶೇಖರ್ ಹೆರೂರು, ಇವೆಂಟ್ ಪ್ರಾಪರ್ಟಿ ಮಾಲೀಕ ಬಸವರಾಜ್, ಗದ್ದೆಯ ಮಾಲೀಕ ಆದರ್ಶ್, ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಮತ್ತಿತರರು ಇದ್ದರು.