ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಚೆಪ್ಪುಡಿರ ರಾಧಾ ಅಚ್ಚಯ್ಯ ಕೃಷಿ ರಂಗದಲ್ಲಿ ಸತತ ಪರಿಶ್ರಮದಿಂದ ಯಶಸ್ಸು ಸಾಧಿಸಿ, ತೃಪ್ತಿದಾಯಕ ಜೀವನ ಕಂಡುಕೊಂಡಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಆಸಕ್ತಿ ಮತ್ತು ಶ್ರಮ ಹಾಕಿದರೆ ಉತ್ತಮ ಸಾಧನೆ ಮಾಡಬಹುದು ಎಂಬುದಕ್ಕೆ ನಿರ್ದಶನವಾಗಿದ್ದಾರೆ.
50 ಎಕರೆ ಕೃಷಿ ಭೂಮಿ ಹೊಂದಿರುವ ರಾಧಾ ಅಚ್ಚಯ್ಯ ಕಾಫಿ, ಕಾಳುಮೆಣಸು, ಅಡಿಕೆ, ಭತ್ತ ಸೇರಿದಂತೆ ವಿವಿಧ ಬೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇದರೊಂದಿಗೆ ಹಣ್ಣು ಮತ್ತು ಹೂವಿನ ಗಿಡಗಳನ್ನು ಬೆಳೆಸುವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕೃಷಿಯನ್ನು ವೈವಿಧ್ಯಮಯಗೊಳಿಸಿದ್ದಾರೆ. ಇವರ ತೋಟವು ಒಂದು ಪ್ರಯೋಗ ಶಾಲೆಯಾಗಿ ಗಮನ ಸೆಳೆದಿದೆ.
ಕಾಲೇಜು ದಿನಗಳಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ರಾಧಾ ಅವರು ವಿವಾಹವಾದ ನಂತರ ಗಂಡನ ಮನೆಗೆ ಬಂದ ಮೇಲೆ ಕೃಷಿಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡರು. ತೋಟದ ನಿರ್ವಹಣೆ, ಹೊಸ ಪ್ರಯೋಗ ಹಾಗೂ ಸಾಪ್ರದಾಯಿಕ ಕೃಷಿ ಅಭಿವೃದ್ಧಿಯತ್ತ ಗಮನ ಹರಿಸಿ ಯಶಸ್ವಿ ರೈತ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಐದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಅವರು ಇತ್ತೀಚಿನ ವರ್ಷಗಳಲ್ಲಿ ನೀರಿನ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಜಮೀನಿನಲ್ಲೇ ದೊಡ್ಡ ಕೆರೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಭತ್ತ ಬೆಳೆಯುವ ಜಾಗದ ವಿಸ್ತೀರ್ಣ ಸ್ವಲ್ಪ ಕಡಿಮೆಯಾಗಿದ್ದರೂ, ನೀರಿನ ನಿರ್ವಹಣೆಯಲ್ಲಿ ಸ್ವಾವಲಂಬಿಯಾಗಿದ್ದಾರೆ.
ಈ ಬಾರಿ ಅವರು ಜೀರಿಗೆ ಸಣ್ಣ ಭತ್ತವನ್ನು ಬೆಳೆದು ಅಧಿಕ ಫಸಲು ಪಡೆದಿದ್ದಾರೆ. ರಾಧಾ ಅಚ್ಚಯ್ಯ ಅವರ ಪುತ್ರ ವಿದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲಿನ ಆಧುನಿಕ ಕೃಷಿ ವಿಧಾನಗಳ ಅನುಭವವನ್ನು ತಾಯಿಯೊಂದಿಗೆ ಹಂಚಿಕೊಳ್ಳುತ್ತಾರೆ. ಆ ಸಲಹೆಗಳನ್ನು ಇಲ್ಲೂ ಅಳವಡಿಸಿಕೊಂಡು ತೋಟದಲ್ಲಿ ಹಲವು ಹೊಸ ಪ್ರಯೋಗಗಳನ್ನು ರಾಧಾ ಮಾಡಿ ಯಶಸ್ವಿಯಾಗಿದ್ದಾರೆ.
ಭತ್ತಕ್ಕೆ ಅಧಿಕ ನೀರು ಬೇಕು ಎಂದು ತೋಟದಲ್ಲಿ 3 ಕೆರೆಗಳನ್ನು ನಿರ್ಮಿಸಿರುವ ರಾಧಾ, ಇಲ್ಲಿ ಮೀನು ಸಾಕಿದ್ದಾರೆ. ಕಾಟ್ಲ, ರೋಹು, ಸಿಲ್ವರ್ ಕಾರ್ಪ್, ಕಾಮನ್ ಕಾರ್ಪ್ ಹಾಗೂ ಥಿಲೇಪಿಯಾ ತಳಿಯ ಮೀನುಗಳನ್ನು ಸಾಕಿ ಅದರಲ್ಲೂ ಲಾಭ ಗಳಿಸುತ್ತಿದ್ದಾರೆ. ಕೃಷಿಗೆ ನೀರು ಒದಗಿಸುವ ಕೆರೆಗಳು ಮೀನುಗಾರಿಕೆ ಮೂಲಕ ಹೆಚ್ಚುವರಿ ಆದಾಯದ ಮೂಲವಾಗಿರುವುದು ಗಮನಾರ್ಹ.
ಹೈನುಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ರಾಧಾ, 20ಕ್ಕೂ ಹೆಚ್ಚು ದೇಸಿ ಹಸುಗಳನ್ನು ಸಾಕಿದ್ದಾರೆ. ಇದಕ್ಕಾಗಿ3 ಪ್ರತ್ಯೇಕ ಕೊಟ್ಟಿಗೆಗಳನ್ನು ನಿರ್ಮಿಸಿದ್ದಾರೆ. ಗರ್ಭಿಣಿ ಹಸುಗಳ ಆರೈಕೆಗೆ ಒಂದು ಕೊಟ್ಟಿಗೆ, ಹಾಲು ಕರೆಯುವ ಹಸುಗಳಿಗೆ ಮತ್ತೊಂದು ಹಾಗೂ ಉಳಿದ ದನಗಳಿಗೆ ಒಂದು ಕೊಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ದಿನಕ್ಕೆ 6 ಲೀಟರ್ ಹಾಲು ದೊರೆಯುತ್ತಿದೆ. ಮನೆ ಬಳಕೆಗೆ ಮತ್ತು ನೆರೆಹೊರೆಯವರಿಗೆ ಹಾಲು ನೀಡುತ್ತಾರೆ. ಶುದ್ಧ ಬೆಣ್ಣೆ ಹಾಗೂ ತುಪ್ಪವನ್ನೂ ತಯಾರಿಸಿ ಲಾಭ ಗಳಿಸುತ್ತಿದ್ದಾರೆ.
ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಪ್ರಯೋಗ
ತೋಟದ ಅಂಚಿನಲ್ಲಿ 40ಕ್ಕೂ ಹೆಚ್ಚು ಡ್ರ್ಯಾಗನ್ ಫ್ರೂಟ್ ಗಿಡ ಬೆಳೆಸಿರುವ ರಾಧಾ, ಆಧುನಿಕ ಮಾದರಿಯ ಕಂಬಗಳ ಅಳವಡಿಕೆಯಿಂದ ಉತ್ತಮ ಫಸಲು ಪಡೆಯುತ್ತಿದ್ದಾರೆ. ಕಳೆದ ವರ್ಷ ಡ್ರಾಗನ್ ಫ್ರೂಟ್‌ನಿಂದ ಉತ್ತಮ ಆದಾಯವೂ ಲಭಿಸಿದೆ.
ಜೀವಾಮೃತದಿಂದ ಮಣ್ಣಿನ ಆರೋಗ್ಯ ಪಾಲನೆ ರಾಸಾಯನಿಕ ಗೊಬ್ಬರ ಬಳಕೆಯಿಂದ ದೂರವಿರುವ ರಾಧಾ, ತಮ್ಮ ತೋಟದಲ್ಲೇ ಜೀವಾಮೃತ ತಯಾರಿಸುತ್ತಾರೆ. ಏಕಕಾಲದಲ್ಲಿ 16 ಡ್ರಂಗಳಲ್ಲಿ ಜೀವಾಮೃತ ಸಿದ್ಧಪಡಿಸಿ ತೋಟಕ್ಕೆ ಸಿಂಪಡಿಸಲಾಗುತ್ತದೆ. ಇದರಿಂದ ಮಣ್ಣಿನಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚುವುದರೊಂದಿಗೆ ಫಲವತ್ತತೆ ಇಮ್ಮಡಿಸುತ್ತದೆ ಎಂದು ರಾಧಾ ಹೇಳುತ್ತಾರೆ.
ಹೂವಿನ ತೋಟ ಹಾಗೂ ಬೊನ್ಸಾಯಿ ಸಂಗ್ರಹ: ಕೃಷಿಯೊಂದಿಗೆ ಹೂವಿನ ತೋಟ ನಿರ್ವಹಣೆಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದಾರೆ. ಮನೆಯ ಸುತ್ತಮುತ್ತ ವಿವಿಧ ಜಾತಿಯ ಆಕರ್ಷಕ ಹೂವಿನ ಗಿಡ ಬೆಳೆಸಿದ್ದಾರೆ. ವಿಶೇಷವಾಗಿ ಬೊನ್ಸಾಯಿ ಗಿಡಗಳ ಮೇಲಿನ ಅವರ ಪ್ರೀತಿ ಗಮನಾರ್ಹವಾಗಿದೆ. ನೂರಾರು ಬೊನ್ಸಾಯಿ ಗಿಡಗಳಿವೆ. ಕೆಲವು ಗಿಡಗಳು 30 ವರ್ಷಕ್ಕೂ ಹೆಚ್ಚು ಹಳೆಯವು. ಆಸಕ್ತರಿಗೆ ಇವುಗಳ ವೀಕ್ಷಣೆಗೂ ರಾಧಾ ಅವಕಾಶ ಮಾಡಿಕೊಡುತ್ತಾರೆ. ದಶಕಗಳ ಹಿಂದೆ ಇವರ ತೋಟಕ್ಕೆ ಕಾಡಾನೆಗಳ ಕಾಟ ಹೆಚ್ಚಾಗಿತ್ತು. ಹಾಗಾಗಿ ಸಂಪೂರ್ಣ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಿದ ಬಳಿಕ ಆನೆಗಳ ಹಾವಳಿ ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದೆ. ಇದರಿಂದ ಕಾರ್ಮಿಕರು ಹಾಗೂ ಕುಟುಂಬ ಸದಸ್ಯರು ನೆಮ್ಮದಿಯಿಂದ ತೋಟದ ಕೆಲಸ ನಿರ್ವಹಿಸುವಂತಾಗಿದೆ ಎನ್ನುತ್ತಾರೆ ರಾಧಾ.
ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ತೋಟಗಾರಿಕೆ ಮತ್ತು ಸಮಾಜಸೇವೆಯನ್ನು ಸಮತೋಲನದಿಂದ ನಿರ್ವಹಿಸಿಕೊಂಡು ಮುನ್ನಡೆಯುತ್ತಿರುವ ರಾಧಾ ಅಚ್ಚಯ್ಯ ಸಾಧನೆ ಮಾದರಿಯಾಗಿದೆ. ತೊಟ್ಟಿಲು ತೂಗುವ ಕೈಗಳು ನೇಗಿಲನ್ನೂ ಹಿಡಿದು ಯಶಸ್ಸು ಸಾಧಿಸಬಲ್ಲದು ಎಂಬುದಕ್ಕೆ ಇವರು ಜೀವಂತ ಉದಾಹರಣೆಯಾಗಿದ್ದಾರೆ.
ಕೃಷಿ ನನ್ನ ಆಸಕ್ತಿಯ ಕ್ಷೇತ್ರವಾಗಿದೆ. ಮೊದಲಿನಿಂದಲೂ ಅದರಲ್ಲಿ ತೊಡಗಿಸಿಕೊಂಡಿದ್ದೇನೆ. ಮಗ ವಿದೇಶದಲ್ಲಿದ್ದರೂ ಕೃಷಿಯಲ್ಲಿ ನಿರತನಾಗಿದ್ದು, ಅವನ ಅನುಭವಗಳು ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿವೆ. ಹೂತೋಟದ ಮೇಲೂ ಆಸಕ್ತಿ ಹೊಂದಿದ್ದೇನೆ. ನೂರಾರು ಬಗೆಯ ಬೋನ್ಸಾಯಿ ಗಿಡಗಳನ್ನೂ ಪೋಷಿಸುತ್ತಿದ್ದೇನೆ. ಒಟ್ಟಾರೆ ಕೃಷಿಯಲ್ಲಿ ತೃಪ್ತಿ ಮತ್ತು ಖುಷಿ ಕಂಡುಕೊಂಡಿದ್ದೇನೆ.