ಸೋಮವಾರಪೇಟೆ ಸಮೀಪದ ಕೂತಿ ಗ್ರಾಮದ ದಿನೇಶ್ ಅವರ ಗದ್ದೆಯಲ್ಲಿ ನಾಟಿ ಕೆಲಸ ನಡೆಯುತ್ತಿರುವುದು.
ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದಿರುವ ಭತ್ತದ ಬೇಸಾಯವನ್ನು ಶ್ರದ್ಧೆಯಿಂದ ಮಾಡುತ್ತ, 10 ಎಕರೆ ಗದ್ದೆಯಲ್ಲಿ ಪ್ರತಿವರ್ಷ ಭತ್ತ ಬೆಳೆಯುವ ಮೂಲಕ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು, ಮಿಶ್ರ ಬೇಸಾಯದಲ್ಲೂ ಸಾಧನೆ ತೋರಿದ್ದಾರೆ ಪ್ರಗತಿಪರ ಕೃಷಿಕ ಕೆ.ಎಂ.ದಿನೇಶ್.
ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ದಿನೇಶ್ ಅವರು, ತೋಳೂರು ಶೆಟ್ಟಳ್ಳಿಯಲ್ಲಿ 10 ಎಕರೆ ಗದ್ದೆಯಲ್ಲಿ ಕಾಯಕ ಮಾಡುತ್ತಿದ್ದಾರೆ. ಮಳೆಯನ್ನೇ ನಂಬಿಕೊಂಡು ಕೃಷಿ ನಡೆಸುತ್ತಿರುವ ಅವರು, ಲಾಭ-ನಷ್ಟದ ಲೆಕ್ಕಾಚಾರಕ್ಕಿಂತ ಹಿರಿಯರಿಂದ ಬಳುವಳಿಯಾಗಿ ಬಂದ ಕೃಷಿ ಪದ್ಧತಿಯನ್ನು ಉಳಿಸಿಕೊಳ್ಳಬೇಕು ಎಂಬ ದೃಢ ಸಂಕಲ್ಪದಿಂದ ಭತ್ತ ಬೆಳೆಯುತ್ತ, ಇಂದಿನ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಸವಾಲುಗಳನ್ನು ಎದುರಿಸಿದ್ದಾರೆ:
ದಿನೇಶ್ ಅವರು ಭತ್ತದೊಂದಿಗೆ ಹಸಿಮೆಣಸು, ತರಕಾರಿ, ಶುಂಠಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಮಿಶ್ರ ಬೇಸಾಯಕ್ಕೆ ಮಹತ್ವ ನೀಡಿದ್ದಾರೆ. ಅತಿವೃಷ್ಟಿ, ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ದುಪ್ಪಟ್ಟು ಕೂಲಿ, ಕೃಷಿ ಉಪಕರಣಗಳು, ಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯಂತಹ ಹಲವು ಸವಾಲುಗಳ ನಡುವೆಯೂ ಕೃಷಿಯಿಂದ ಹಿಂದೆ ಸರಿದಿಲ್ಲ. ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈಹಿಡಿಯುತ್ತದೆ ಎಂಬ ನಂಬಿಕೆಯಿಂದ ಮಿಶ್ರ ಬೇಸಾಯವನ್ನು ಮುಂದುವರಿಸಿದ್ದಾರೆ.
ವರ್ಷಕ್ಕೆ 80 ಕ್ವಿಂಟಾಲ್ ಇಳುವರಿ
10 ಎಕರೆ ಗದ್ದೆಯಲ್ಲಿ ಸರಾಸರಿ 80 ಕ್ವಿಂಟಾಲ್ ಭತ್ತದ ಇಳುವರಿಯನ್ನು ಪಡೆಯುತ್ತಿರುವ ದಿನೇಶ್, ಪ್ರತಿ ವರ್ಷ ಸುಮಾರು 50 ಕ್ವಿಂಟಾಲ್ ಭತ್ತ ಮಾರಾಟ ಮಾಡುತ್ತಾರೆ. ಉಳಿದ ಭತ್ತವನ್ನು ಮನೆಯ ಬಳಕೆಗೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಕುಟುಂಬದ ಆಹಾರದ ಅವಶ್ಯಕತೆಯನ್ನೂ ಸ್ವಂತ ಕೃಷಿಯ ಮೂಲಕವೇ ಪೂರೈಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ದಿನೇಶ್ ಅವರ ಅಜ್ಜನ ಕಾಲದಲ್ಲಿ ಜೋಡೆತ್ತುಗಳ ಮೂಲಕ ಗದ್ದೆ ಉಳುಮೆ ಹಾಗೂ ನಾಟಿ ಕಾರ್ಯ ನಡೆಯುತ್ತಿತ್ತು. ಕೃಷಿಯಲ್ಲಿ ಯಂತ್ರ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಬಳಸಿ ನಾಟಿ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.
ಭತ್ತ ಕೃಷಿಯಿಂದ ಹೆಚ್ಚಿನ ಲಾಭವಿಲ್ಲ. ಗದ್ದೆ ಭೂಮಿಯಲ್ಲಿ ಅಡಿಕೆ ಅಥವಾ ಕಾಫಿ ಬೆಳೆ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಸಲಹೆ ನೀಡುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಭತ್ತ ಕೃಷಿ ಕೈಬಿಡುವ ಪ್ರಶ್ನೆಯೇ ಇಲ್ಲ ಎಂಬುದು ದಿನೇಶ್ ಅವರ ಸ್ಪಷ್ಟ ನಿಲುವು.
ಭತ್ತ ಕೃಷಿ ಲಾಭದಾಯಕವಲ್ಲ ಎಂಬುದು ಗೊತ್ತಿದ್ದರೂ ಭತ್ತದ ಬೇಸಾಯ ಅವರಿಗೆ ಬೇಸರ ತರಿಸಿಲ್ಲ.
ಭತ್ತ ಈ ಮಣ್ಣಿಗೆ ಹೊಂದುವ ಕೃಷಿ. ಹವಾಮಾನ ವೈಪರೀತ್ಯವನ್ನು ಸಹಿಸಿಕೊಳ್ಳುವ ಶಕ್ತಿಯೂ ಇದಕ್ಕಿದೆ. ಊಟಕ್ಕೆ ಬೇಕಾದ ತಳಿ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವ ತಳಿಯನ್ನು ಆಯ್ಕೆ ಮಾಡಿಕೊಂಡು ನಾಟಿ ಮಾಡಿದರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳುತ್ತಾರೆ.
ಕೂತಿ ಗ್ರಾಮದ ತಮ್ಮ ಜಮೀನಿನಲ್ಲಿ ದಿನೇಶ್ ಅವರು ಕಾಫಿ, ಕಾಳುಮೆಣಸು, ಕಿತ್ತಳೆ, ನಿಂಬೆ ಹಾಗೂ ಬಾಳೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಾಫಿ ತೋಟದಲ್ಲಿ ಒಂದು ಎಕರೆಗೆ ಗರಿಷ್ಠ 14 ಚೀಲ ಅರೆಬಿಕಾ ಪಾರ್ಚ್‌ಮೆಂಟ್ ಕೊಯ್ಲು ಮಾಡಿದ ನಿದರ್ಶನವೂ ಇದೆ. ಕಾಫಿ ಕೊಯ್ಲು, ಮರಕಪಾತು ಹಾಗೂ ಕಳೆ ತೆಗೆಯುವ ಕೆಲಸ ಹೊರತುಪಡಿಸಿ, ಬಹುತೇಕ ಕೃಷಿ ಚಟುವಟಿಕೆಗಳನ್ನು ಕುಟುಂಬದ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಇದರಿಂದ ಕೂಲಿ ವೆಚ್ಚ ಕಡಿಮೆಯಾಗಿದೆ. ಮಿಶ್ರ ಬೇಸಾಯದ ಮೂಲಕ ಕೃಷಿ ಲಾಭದಾಯಕವಾಗುತ್ತಿದೆ ಎಂದು ದಿನೇಶ್ ಅಭಿಪ್ರಾಯಪಡುತ್ತಾರೆ.
ಕುಟುಂಬವೇ ಕೃಷಿಗೆ ಬೆನ್ನೆಲುಬು
ದಿನೇಶ್ ಅವರ ಪತ್ನಿ ಬಿ.ಬಿ. ಮಮತಾ ಅವರೂ ಕೃಷಿ ಕಾರ್ಯಗಳಲ್ಲಿ ಪತಿಯೊಂದಿಗೆ ಕೈಜೋಡಿಸುತ್ತಿದ್ದಾರೆ. ಮಕ್ಕಳಾದ ಎಚ್.ಡಿ. ಸಾರಿಕಾ ಮತ್ತು ಸಂಚಿತಾ ಇಂಜಿನಿಯರಿಂಗ್ ಪದವಿ ಪಡೆದಿದ್ದರೂ ಕೃಷಿ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಕುಟುಂಬದ ಸದಸ್ಯರು ಹೆಚ್ಚಿನ ಸಮಯವನ್ನು ಕೃಷಿ ಭೂಮಿಯಲ್ಲೇ ಕಳೆಯುತ್ತಿರುವುದು ಬೆಳೆಗಳ ನಿರ್ವಹಣೆಗೆ ಅನುಕೂಲವಾಗುತ್ತಿದೆ. ಕುಟುಂಬದವರು ಕೃಷಿ ಭೂಮಿಯನ್ನು ಪ್ರೀತಿಸುವುದರಿಂದ ಬೆಳೆಗಳ ಬಗ್ಗೆ ನಿರಂತರ ಗಮನ ಹರಿಸಲು ಸಾಧ್ಯವಾಗುತ್ತದೆ. ಇದರಿಂದ ಫಸಲು ಕೂಡ ಕೈಹಿಡಿಯುತ್ತಿದೆ ಎನ್ನುತ್ತಾರೆ ದಿನೇಶ್.
ಹಿರಿಯರು ಅನುಸರಿಸಿಕೊಂಡು ಬಂದ ಕೃಷಿ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಜಾನುವಾರುಗಳ ಗೊಬ್ಬರವನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಮಳೆಗಾಲದಲ್ಲಿ ಗದ್ದೆಗಳಲ್ಲಿ ಹೂಳು ತುಂಬದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡುತ್ತಾರೆ.
ಕಳೆದ ಹತ್ತು ವರ್ಷಗಳಿಂದ ಅನೇಕ ಕಡೆ ಗದ್ದೆ ಭೂಮಿಯನ್ನು ಮುಚ್ಚಿ ಕಾಫಿ ತೋಟಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಭತ್ತದ ಗದ್ದೆಗಳು ಮತ್ತಷ್ಟು ಕಡಿಮೆಯಾಗುವ ಆತಂಕವಿದೆ. ಭತ್ತ ಕೃಷಿ ಉಳಿಯಬೇಕಾದರೆ ರೈತರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸರ್ಕಾರವೂ ರೈತರಿಗೆ ನೆರವಾಗಬೇಕು ಎಂಬುದು ದಿನೇಶ್ ಅವರ ಆಶಯ.
ಎಕರೆಗೆ ವಾರ್ಷಿಕ 20ರಿಂದ 30 ಸಾವಿರ ರೂ. ಪ್ರೋತ್ಸಾಹಧನ ನೀಡಿದರೆ ರೈತರು ಭತ್ತ ಬೆಳೆಯಲು ಮುಂದಾಗುತ್ತಾರೆ. ಇಲ್ಲದಿದ್ದರೆ ಮುಂದಿನ ಹತ್ತು ವರ್ಷಗಳಲ್ಲಿ ಶೇ.70ರಷ್ಟು ಭತ್ತದ ಗದ್ದೆಗಳು ತೋಟಗಳಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಕೃಷಿ ಇಲಾಖೆ ರೈತಸ್ನೇಹಿ ಯೋಜನೆಗಳನ್ನು ರೂಪಿಸಿ ಭತ್ತ ಕೃಷಿಕರಿಗೆ ವಿಶೇಷ ಸಹಾಯಧನ ನೀಡಬೇಕು. ಭತ್ತ ನಷ್ಟದ ಕೃಷಿ ಎಂಬ ಭಾವನೆಯನ್ನು ಹೋಗಲಾಡಿಸಿ, ರೈತರಿಗೆ ಭತ್ತ ಕೃಷಿಯ ಮಹತ್ವವನ್ನು ಮನವರಿಕೆ ಮಾಡಬೇಕು ಎನ್ನುತ್ತಾರೆ ದಿನೇಶ್.
ಒಂದು ಕಾಲದಲ್ಲಿ ಸೋಮವಾರಪೇಟೆ ತಾಲೂಕನ್ನು ಭತ್ತದ ಕಣಜ ಎಂದು ಕರೆಯಲಾಗುತ್ತಿತ್ತು. ಬಹುತೇಕ ರೈತರು ಭತ್ತ ಕೃಷಿ ಮಾಡುತ್ತಿದ್ದರು. ಮಾತ್ರವಲ್ಲ, ಹೆಚ್ಚು ಭತ್ತ ಬೆಳೆಯುತ್ತಿದ್ದ ಕೃಷಿಕರಿಗೆ ಶ್ರೀಮಂತರು ಎಂಬ ಗೌರವವೂ ದೊರೆಯುತ್ತಿತ್ತು. ಆದರೆ ಕಾಲ ಬದಲಾಗುತ್ತಿದ್ದಂತೆ ಭತ್ತ ಕೃಷಿಯ ವಿಸ್ತೀರ್ಣವೂ ಕುಗ್ಗುತ್ತಿದೆ. ಹೀಗಾಗಿ ಭತ್ತದ ಬೇಸಾಯವನ್ನು ಕೇವಲ ರೈತರ ಜವಾಬ್ದಾರಿಯಾಗಿ ನೋಡದೆ, ಆಹಾರ ಭದ್ರತೆ ಮತ್ತು ಕೃಷಿ ಪರಂಪರೆಯ ಭಾಗವಾಗಿ ಪರಿಗಣಿಸಬೇಕು. ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎನ್ನುತ್ತಾರೆ ದಿನೇಶ್. ಕೃಷಿ ಪರಂಪರೆಯನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಎಂಬುದು ದಿನೇಶ್ ಅವರ ಅಭಿಮತ.
ಕಾಫಿ, ಕಾಳುಮೆಣಸು, ಅಡಿಕೆ ನಂಬಿ ಅನೇಕ ರೈತರು ಭತ್ತ ಬೆಳೆಯುವ ಭೂಮಿಯನ್ನು ತೋಟವನ್ನಾಗಿ ಮಾಡಿದ್ದಾರೆ. ಇದೇ ಪದ್ಧತಿ ಮುಂದುವರಿದರೆ ತಿನ್ನಲು ಅನ್ನವೇ ಇಲ್ಲದಂತಾಗುತ್ತದೆ. ಹವಾಮಾನ ಏರುಪೇರಿನಿಂದ ನಿಗದಿತ ಸಮಯದಲ್ಲಿ ಕಾಫಿ ಹೂವು ಅರಳದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ವಿಪರೀತ ಮಳೆ ಬಿದ್ದರೆ ಕಾಫಿ ಫಸಲು ಕೈಸೇರುವುದಿಲ್ಲ. ಭತ್ತ ಇದ್ದರೆ ಕುಟುಂಬವನ್ನು ಸಾಕಬಹುದು. ಸರ್ಕಾರವೂ ಭತ್ತ ಕೃಷಿ ಮಾಡುವವರಿಗೆ ಸಹಾಯಧನದ ಮೂಲಕ ಪ್ರೋತ್ಸಾಹ ನೀಡಬೇಕು.
ಪ್ರಗತಿಪರ ಕೃಷಿಕ, ಕೂತಿ ಗ್ರಾಮ.