ಪೊನ್ನಂಪೇಟೆಯ ತಾ.ಪಂ. ಸಭಾಂಗಣದಲ್ಲಿ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಮಾತನಾಡಿದರು. ಪ್ರಶಾಂತ್, ಶೇಖರ್, ಸಂಜನಾ, ಪ್ರವೀಣ್ ಕುಮಾರ್ ಇದ್ದರು.
ಕೊಡಗು ಜಿಲ್ಲೆಯಲ್ಲಿ ಮುಂಗಾರು ಶೀಘ್ರ ಆರಂಭವಾಗುವ ಲಕ್ಷಣಗಳು ಕಾಣುತ್ತಿದ್ದು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ವಿರಾಜಪೇಟೆ ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸಂಬAಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪೊನ್ನಂಪೇಟೆಯ ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕು ಮಟ್ಟದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ಜಿಲ್ಲೆಯ ಅಲ್ಲಲ್ಲಿ ಗಾಳಿ ಮಳೆಗೆ ಮರದ ಕೊಂಬೆಗಳು ಬೀಳುತ್ತಿದ್ದು, ಇದರಿಂದ ವಿದ್ಯುತ್ ಹಾಗೂ ಸಾರಿಗೆ ಸಂಪರ್ಕಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ರಸ್ತೆ ಬದಿ ಬೀಳುವ ಕೊಂಬೆಗಳನ್ನು ಕಡಿಯುವುದು, ಚರಂಡಿ ಹೂಳು ತೆಗೆಯುವುದು, ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವುದು ಮತ್ತಿತರ ಅಗತ್ಯ ಕ್ರಮ ವಹಿಸಬೇಕು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದಲ್ಲಿ ತಳಮಟ್ಟದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಬೇಕು. ಸಾರ್ವಜನಿಕರು ಗ್ರಾಮದ ಮಟ್ಟದಲ್ಲಿ ಆಗಬೇಕಿರುವ ಸಣ್ಣ ಪುಟ್ಟ ಕೆಲಸಗಳಿಗೂ ನನ್ನ ಬಳಿಗೆ ಆಗಮಿಸುತ್ತಾರೆ. ಆದ್ದರಿಂದ ಗ್ರಾಮ ಪಂಚಾಯತಿ ಮಟ್ಟದಲ್ಲಿಯೇ ಸಂಬAಧಪಟ್ಟ ಎಂಜಿನಿಯರ್ ಅಥವಾ ಅಧಿಕಾರಿಗಳ ಗಮನಕ್ಕೆ ತಂದರೆ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು.
ಅಂಗನವಾಡಿ, ಶಾಲಾ-ಕಾಲೇಜುಗಳ ಕಟ್ಟಡಗಳು ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿದ್ದರೆ ವರದಿ ನೀಡಬೇಕು. ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸುವುದು, ವಿದ್ಯುತ್ ಪರಿವರ್ತಕಗಳನ್ನು ದಾಸ್ತಾನು ಮಾಡಿಕೊಂಡು ಅಳವಡಿಸುವುದು ಮತ್ತಿತರ ಕಾರ್ಯದ ಬಗ್ಗೆ ಸೆಸ್ಕ್ ಇಲಾಖೆ ಎಂಜಿನಿಯರ್ ಗಮನಹರಿಸಬೇಕು. ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಪರಿಹರಿಸುವಂತಾಗಬೇಕು. ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಹೆಚ್ಚಿನ ಗಮನ ನೀಡಬೇಕು.
ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಯದಿದ್ದಲ್ಲಿ ಸೆಸ್ಕ್, ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಗೆ ಕೆಲಸ ಹೆಚ್ಚಾಗಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಆದ್ದರಿಂದ ಈ ಕೆಲಸವನ್ನು ಶೀಘ್ರ ಪೂರ್ಣಗೊಳಿಸಬೇಕು. ಹೆಚ್ಚಿನ ಮಳೆಯಿಂದಾಗಿ ಮನೆ ಹಾನಿಯಾದಲ್ಲಿ ಕೂಡಲೇ ಪರಿಹಾರ ವಿತರಿಸಲು ಕ್ರಮವಹಿಸಬೇಕು. ಮಳೆಗಾಲದ ಸಂದರ್ಭದಲ್ಲಿ ಆಹಾರಧಾನ್ಯವನ್ನು ಸಮರ್ಪಕವಾಗಿ ಪೂರೈಸಬೇಕು. ನದಿ, ಹೊಳೆ ಬದಿಯಲ್ಲಿ ವಾಸಿಸುವ ಕುಟುಂಬಗಳಿಗೆ ಮುನ್ನೆಚ್ಚರಿಕೆಯಾಗಿ ಮಾಹಿತಿ ನೀಡಬೇಕು. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ ದಾಸ್ತಾನು ಇರಬೇಕು ಎಂದು ಹೇಳಿದರು.
ಮಳೆಗಾಲದ ಸಂದರ್ಭದಲ್ಲಿ ಜಾನುವಾರು ರಕ್ಷಣೆಗೂ ಗಮನಹರಿಸಬೇಕು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ಹಾಗೂ ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ್ ಶ್ರೀಮಂಗಲ ಆಸ್ಪತ್ರೆಯಲ್ಲಿ ಜ್ವರದ ಔಷಧಿಯೇ ಇಲ್ಲ. ಈ ರೀತಿಯಾದರೆ ಹೇಗೆ ? ಎಂದು ಸಭೆಯ ಗಮನಕ್ಕೆ ತಂದರು.
ಮಡಿಕೇರಿ ತಾ.ಪಂ. ಇಒ ಶೇಖರ್ ಮಾತನಾಡಿ ಮುಂಗಾರು ಸಂದರ್ಭದಲ್ಲಿ ಮುನ್ನೆಚ್ಚರ ವಹಿಸುವಲ್ಲಿ ಈಗಾಗಲೇ ಹಲವು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಂಚಾಯತ್ ರಾಜ್, ಕಂದಾಯ, ಪೊಲೀಸ್, ಎಂಜಿನಿಯರಿAಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಕಾರ್ಯ ಕೈಗೊಳ್ಳಲಾಗಿದೆ. ಗ್ರಾ.ಪಂ. ಮಟ್ಟದಲ್ಲಿಯೂ ಸಹ ಆಡಳಿತ ಅಧಿಕಾರಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಹಲವು ಸಲಹೆ ಮಾರ್ಗದರ್ಶನ ನೀಡಲಾಗಿದೆ. ಪ್ರವಾಹ ಪೀಡಿತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರ ವಹಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಕುಮಾರ್ ಮಾತನಾಡಿ ಮುಂಗಾರು ಸಂದರ್ಭದಲ್ಲಿ ಮುನ್ನೆಚ್ಚರ ವಹಿಸುವ ಬಗ್ಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಮುಖರಾದ ಲಾಲು ಅಪ್ಪಣ್ಣ ಮಾತನಾಡಿ ಬಿರುನಾಣಿ, ಬಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಮಳೆ ಆರಂಭವಾದ ನಂತರ ಜಂಗಲ್ ಕಟ್ಟಿಂಗ್, ಗುಂಡಿ ಮುಚ್ಚುವುದು, ಚರಂಡಿ ಸ್ವಚ್ಚಗೊಳಿಸುವುದು ಸೇರಿದಂತೆ ಯಾವುದೇ ರೀತಿಯ ಕೆಲಸ ಮಾಡಲು ಕಷ್ಟಸಾಧ್ಯ, ಆದ್ದರಿಂದ ಮಳೆ ಆರಂಭಕ್ಕೂ ಮೊದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.
ಕುಡಿಯುವ ನೀರು ವಿಭಾಗದ ಎಂಜಿನಿಯರ್ ಭಾಸ್ಕರ್ ಮಾತನಾಡಿ ಕುಡಿಯುವ ನೀರು ಕಾಮಗಾರಿಗೆ ಸರ್ಕಾರದಿಂದ ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಕಾಮಗಾರಿ ಸಂಬAಧ ಅನುಮೋದನೆ ನೀಡಬೇಕಿದೆ ಎಂದು ಕೋರಿದರು.
ಪೊನ್ನಂಪೇಟೆ ತಹಸೀಲ್ದಾರ್ ಸಂಜನಾ, ತಾ.ಪಂ. ಇಒ, ಮಹಿಳಾ ಮತ್ತು ಅಭಿವೃದ್ಧಿ, ಸೆಸ್ಕ್, ಲೋಕೋಪಯೋಗಿ, ಪಂಚಾಯತ್ ರಾಜ್, ವಿರಾಜಪೇಟೆ ಪುರಸಭೆ ಮುಖ್ಯಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮಳೆಗಾಲದ ಸಂದರ್ಭದಲ್ಲಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು.