ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಮಾತನಾಡಿದರು.
- ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಸಲಹೆ
- ಹಾಕಿ ತರಬೇತಿ ಶಿಬಿರ
ನಾಪೋಕ್ಲು: ಹಿರಿಯರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಒಲಿಂಪಿಯನ್ ಬಾಳೆಯಡ ಸುಬ್ರಮಣಿ ಹೇಳಿದರು.
ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಬುಧವಾರ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು, ಇಂತಹ ಸಮಯ ಮತ್ತೆ ಸಿಗದು. ಸಮಯದ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಗುರಿ ತಲುಪಬೇಕು ಎಂದರು.
ಶಿಬಿರದಲ್ಲಿ ಇದ್ದಾಗ ಮಾತ್ರ ತರಬೇತಿ ಪಡೆದು ಮೈದಾನವನ್ನು ಬಳಕೆ ಮಾಡುವುದಲ್ಲ. ಸಮಯ ಸಿಕ್ಕಾಗಲೆಲ್ಲ ಆಟದ ಮೈದಾನಗಳ ಸದುಪಯೋಗ ಪಡೆದು ಶಿಕ್ಷಣದ ಜತೆ ಕ್ರೀಡೆಯಲ್ಲೂ ಮುಂದುವರಿಯಬೇಕು ಎಂದರು.
ಶಿಕ್ಷಣ ಪೂರೈಸಿದ ನಂತರ ಉದ್ಯೋಗಕ್ಕೆ ಸೇರಿ ಹಣ ಸಂಪಾದಿಸಿದಾಗ ಗುರು ಹಿರಿಯರನ್ನು, ಪಾಲಕರನ್ನು ಕಡೆಗಣಿಸಬಾರದು ಎಂದು ಕಿವಿಮಾತು ಹೇಳಿದರು.
ಹಾಕಿ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ನಿತ್ಯವೂ ತರಬೇತಿ ಪಡೆದರೆ ಮಾನಸಿಕವಾಗಿ, ದೈಹಿಕವಾಗಿ ಬೆಳೆಯಲು ಸಾಧ್ಯ ಎಂದರು.
ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಿದ್ದ ಹಾಕಿ ತರಬೇತಿ ಶಿಬಿರದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು.
ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಅಂಜಪರವಂಡ ರೋಶನ್ ಮಾದಪ್ಪ, ಮುಕ್ಕಾಟಿರ ಮುತ್ತಪ್ಪ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಅಪ್ಪಚ್ಚಿರ ಪಳಂಗಪ್ಪ, ಕೇಟೋಳಿರ ಡಾಲಿ ಅಚ್ಚಪ್ಪ, ಹಿರಿಯರಾದ ಕೇಟೋಳಿರ ಡಾಲಿ, ಹಾಕಿ ಕ್ಲಬ್ ಸಂಚಾಲಕ ಮನು ಮುತ್ತಪ್ಪ, ಕೈಬುಲಿರ ಉಮೇಶ್, ಗೌರವ ಕಾರ್ಯದರ್ಶಿ ಚಂಗೆಟ್ಟರ ಕುಮಾರ ಸೋಮಣ್ಣ, ಕಜಾಂಚಿ ಮಚ್ಚುರ ಯದುಕುಮಾರ್ ಇತರರು ಇದ್ದರು.