ವಾಸವಿ ಮಾತೆ ವಿಶ್ವರೂಪ ದರ್ಶನ ನೀಡುವ ದಿನದ ಹಿನ್ನೆಲೆಯಲ್ಲಿ ಆರ್ಯವೈಶ್ಯರು ವಾಸವಿ ದೀಕ್ಷೆ ಸ್ವೀಕರಿಸಿದರು. ಕೆ.ಜೆ. ಚಿನ್ನಸ್ವಾಮಿ, ಬಿ.ಎಲ್. ಸತೀಶ್, ಗಿರೀಶ್ ಭಟ್, ಬಿ.ಆರ್. ನಾಗೇಂದ್ರ ಪ್ರಸಾದ್, ವಾಣಿಶ್ರೀ ಮತ್ತಿತರರು ಇದ್ದರು.
ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿ ಲೋಕಕಲ್ಯಾಣಾರ್ಥ ಅಗ್ನಿ ಪ್ರವೇಶ ಮಾಡಿರುವುದಾಗಿ ಪುರಾಣಗಳು ಹೇಳುತ್ತವೆ. ಅಂತಹ ಪುಣ್ಯ ದಿನವನ್ನು ಆರ್ಯವೈಶ್ಯರು ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆಯನ್ನು ನೆರವೇರಿಸಿ ಆಚರಿಸುವುದು ವಾಡಿಕೆ ಎಂದು ವಾಸವಿ ದೀಕ್ಷಾ ಸಮಿತಿಯ ಅಧ್ಯಕ್ಷ ಕೆ.ಜೆ. ಚಿನ್ನಸ್ವಾಮಿ ತಿಳಿಸಿದ್ದಾರೆ. ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಾಸವಿ ದೀಕ್ಷೆ ಸ್ವೀಕರಿಸಿ ಮಾತನಾಡಿದರು.
ಮಂಗಳವಾರ (ಜ.20) ವಾಸವಿ ಮಾತೆ ವಿಶ್ವರೂಪ ದರ್ಶನ ನೀಡುವ ಪುಣ್ಯ ದಿನ. ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಅಂದು ವಿಶೇಷ ಹೋಮ ಹವನ ನೆರವೇರಿಸಲಾಗುತ್ತದೆ ಎಂದರು.
ವಾಸವಿ ದೀಕ್ಷಾ ಸಮಿತಿ ಕಾರ್ಯದರ್ಶಿ ಬಿ.ಎಲ್. ಸತೀಶ್ ಮಾತನಾಡಿ 5 ದಿನಗಳ ಕಾಲ ವಾಸವಿ ದೀಕ್ಷೆ ಸ್ವೀಕರಿಸಿ, ಅಯ್ಯಪ್ಪ ಮಾಲಾಧಾರಿಗಳ ರೀತಿಯಲ್ಲಿ ವ್ರತ ಆಚರಿಸಿ ಸೋಮವಾರ (ಜ.19)ಕಟ್ಟು ಕಟ್ಟಲಾಗುತ್ತದೆ. ಕಟ್ಟು ತಲೆಯ ಮೇಲೆ ಹೊತ್ತುಕೊಂಡು ಮಾಲಾಧಾರಿಗಳು ನಗರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ, ಮರಳಿ ನಮ್ಮ ದೇವಸ್ಥಾನಕ್ಕೆ ಬಂದು ಪೂಜೆ, ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಗಿರೀಶ್ ಭಟ್ ಮಾತನಾಡಿ, ಮಾಘ ಮಾಸ ಶುಕ್ಲ ಪಕ್ಷದ ಬೀದಿಗೆಯಂದು ಬೆಳಗೆ 6 ಗಂಟೆಗೆ ಸಂಕಲ್ಪ, ಪಂಚಾಮೃತ ಅಭಿಷೇಕ, ಮಹಾಗಣಪತಿ, ನವಗ್ರಹ, ಮೃತಂಜಯ, ಆಯುಷ್ಯ, ಪರಿವಾರ ದೇವತೆಗಳ ಮತ್ತು ವಾಸವಿ ಮೂಲ ಮಂತ್ರಗಳ ಹೋಮ, ಜನಾಂಗದ 102 ಗೋತ್ರದ ಹೋಮ, ತದನಂತರ ಪೂರ್ಣಾಹುತಿಯಾದ ನಂತರದಲ್ಲಿ ದೇವರಿಗೆ ಮಹಾಮಂಗಳಾರತಿ ನಡೆಯಲಿದೆ. ಸಂಧ್ಯಾಕಾಲದಲ್ಲಿ ವಾಸವಿ ದೀಕ್ಷಾರ್ಥಿಗಳು ಮಾಲೆ ತೆಗೆಯಲಿದ್ದಾರೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ವಾಸವಿ ದೀಕ್ಷಾ ಸಮಿತಿಯ ಖಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್. ರಮೇಶ್, ಎಸ್.ಎಂ. ಸತೀಶ್, ವಿ.ಆರ್. ಮಂಜುನಾಥ್, ಕೆ.ಎಸ್. ನಾಗೇಶ್, ನಾಗಮಣಿ ಈ ಸಂದರ್ಭ ಇದ್ದರು.