ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ನಡೆದ ಆಟಿ ಹಬ್ಬದಲ್ಲಿ ಆಟಿ ತಿಂಗಳ ವಿಶೇಷ ತಿಂಡಿ, ತಿನಿಸುಗಳನ್ನು ಗಣ್ಯರು ಸವಿದರು. ಆನಂದ್ ಕರಂದ್ಲಾಜೆ, ಕೊಟ್ಟಕೇರಿಯನ ಲೀಲಾ ದಯಾನಂದ, ಕಟ್ಟೆಮನೆ ಪ್ರೇಮಾ, ಬಾರಿಯಂಡ ಜೋಯಪ್ಪ, ಪೂಳಕಂಡ ಸಂದೀಪ್, ಸೂರ್ತಲೆ ಸೋಮಣ್ಣ, ಅಮೆ ದಮಯಂತಿ ಇದ್ದರು.
ಗೌಡ ಜನಾಂಗದ ಸಾಂಪ್ರದಾಯಿಕ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೂ ದಾಟಿಸುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಯುವ ಜನಾಂಗ ಆಸಕ್ತಿ ವಹಿಸÀಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಹೇಳಿದರು. ಕೊಡಗು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಗೌಡ ಸಮಾಜದಲ್ಲಿ ಬುಧವಾರ ನಡೆದ ಆಟಿ ಹಬ್ಬ ಹಾಗೂ ಗಾನ ಕೋಗಿಲೆ ಎಸ್. ಜಾನಕಿ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಟಿ ಹಬ್ಬ ಅರೆಭಾಷೆ ಗೌಡ ಸಮುದಾಯದವರ ಸಾಂಪ್ರದಾಯಿಕ ಆಚರಣೆಯಾಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹಿಳಾ ಒಕ್ಕೂಟದವರು ಪ್ರತಿ ವರ್ಷ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವದು ಶ್ಲಾಘನೀಯ. ಇದರೊಂದಿಗೆ ಎಲ್ಲ ಕಡೆಗಳಲ್ಲೂ ಸಮಾಜಗಳ ಮೂಲಕವೂ ಆಚರಿಸಲಾಗುತ್ತಿದೆ. ಇಂತಹ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿವಹಿಸಬೇಕು. ಕಾರ್ಯಕ್ರಮ ಆಯೋಜನೆ ಮಾಡಲು ಹಣ ಸಂಗ್ರಹ ಕಷ್ಟದ ಕೆಲಸ. ಹಾಗಾಗಿ ಮುಂದಿನ ದಿನಗಳಲ್ಲಿ ಗೌಡ ಸಮಾಜ ನೇತೃತ್ವ ವಹಿಸಿಕೊಂಡು ಮಹಿಳಾ ಒಕ್ಕೂಟ ಹಾಗೂ ಯುವ ವೇದಿಕೆಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು. ಜನಾಂಗದಲ್ಲಿ ಅನೇಕ ಮಂದಿ ಸಾಹಿತಿಗಳಿದ್ದು, ಪುಸ್ತಕ ಹೊರತರಲು ಸಾಧ್ಯವಾಗದವರಿಗೆ ಪುಸ್ತಕ ಪ್ರಕಟಣೆಗೆ ಒಕ್ಕೂಟದಿಂದ ಕರ್ನಾಟಕ ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಸಹಕಾರದೊಂದಿಗೆ ನೆರವು ಕಲ್ಪಿಸಲಾಗುವುದು. ಆಸಕ್ತರು ಒಕ್ಕೂಟವನ್ನು ಸಂಪರ್ಕ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಜನಾಂಗ ಬಾಂಧವರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಆದರೂ ಸಂಘಟನಾತ್ಮಕವಾಗಿ, ಜನಾಂಗದ ಪರವಾಗಿ ಇನ್ನೂ ಮುಂದುವರಿಯಬೇಕಾಗುತ್ತದೆ. ಒಕ್ಕೂಟದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಒಕ್ಕೂಟದವರು ವಿಧವೆಯರು ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಇರುವಂತಹ ಗೊಂದಲದ ಬಗ್ಗೆ ಸಂವಾದ ಏರ್ಪಡಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಆಟಿ ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ಆಟಿ ತಿಂಗಳ ವಿವಿಧ ಖಾದ್ಯ, ಹಣ್ಣು ಹಂಪಲುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಾಹಿತಿ ಕೊಟ್ಟಕೇರಿಯನ ಲೀಲಾ ದಯಾನಂದ, ಆಟಿ ಹಬ್ಬ ಕೇವಲ ಒಂದು ಹಬ್ಬವಲ್ಲ. ಅದು ನಮಗೆ ನಮ್ಮ ಹಿರಿಯರು ಬಿಟ್ಟು ಹೋದ ಸಂಸ್ಕೃತಿ, ಪರಂಪರೆ, ಬದುಕಿನ ಒಂದು ಭಾಗವಾಗಿದೆ. ಇದನ್ನು ಮುಂದುವರಿಸಿಕೊAಡು ಹೋಗಲು ಇಂತಹ ಕಾರ್ಯಕ್ರಮಗಳು ಒಂದು ಕೊಂಡಿಯಾಗಿದ್ದು, ಆ ಮೂಲಕ ಮುಂದಿನ ಪೀಳಿಗೆ ಕೂಡ ಮುಂದುವರಿಸಿಕೊAಡು ಹೋಗಲಿದ್ದಾರೆ. ಪ್ರಕೃತಿ ಕೂಡ ನಮ್ಮ ಬದುಕಿನ ಭಾಗವಾಗಿದ್ದು, ಪರಿಸರ ಆಯಾಯ ಕಾಲಕ್ಕೆ ಒದಗಿಸಿಕೊಡುವ ಆಹಾರ ಪದ್ಧತಿಗಳನ್ನು ಸ್ವೀಕರಿಸಬೇಕೆಂದು ಹೇಳಿದರು.
ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಿದ್ಧಪಡಿಸಲಾದ 14 ಅರೆಭಾಷೆ ಭಾವಗೀತೆಗಳ ಧ್ವನಿಸುರುಳಿ ಬಿಡುಗಡೆಗೊಳಿಸಿದ ಕೊಡಗು ಗೌಡ ಸಮಾಜದ ಉಪಾಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಆಟಿ ಹಬ್ಬ ಸಾಂಪ್ರದಾಯಿಕ ಆಚರಣೆಯೊಂದಿಗೆ ವೈಜ್ಞಾನಿಕ ಹಿನ್ನೆಲೆಯನ್ನು ಕೂಡ ಹೊಂದಿದೆ. ಆಟಿ ತಿಂಗಳಲ್ಲಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ಹಲವಷ್ಟು ಪ್ರಯೋಜನಕಾರಿಯಾಗುವ ಔಷಧೀಯ ಗುಣಗಳಿವೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ನುಡಿ ನಮನದೊಂದಿಗೆ ಸಂತಾಪ ಸೂಚಿಸಲಾಯಿತು. ಗಾಯಕ ಪಾಣತ್ತಲೆ ರಕ್ಷಿತ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪಾಣತ್ತಲೆ ರಕ್ಷಿತ್ ಹಾಗೂ ಮಹಿಳಾ ಒಕ್ಕೂಟದ ಸದಸ್ಯರುಗಳಾದ ಗೋವಿಂದಮ್ಮನ ಪ್ರಿಯ ಹಾಗೂ ತಂಡದವರು, ಪೇರಿಯನ ಲತಾ, ಬೈಮನ ಜ್ಯೋತಿ, ಕೇಕಡ ಇಂದುಮತಿ ಅವರುಗಳು ಹಾಡು, ಸೋಬಾನೆ ಪದಗಳನ್ನು ಹಾಡಿ ಗಮನ ಸೆಳೆದರು.
ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸದಸ್ಯ ಪೂಳಕಂಡ ಸಂದೀಪ್, ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ, ಕೃಷಿ ಸಾಧಕಿ ಕಟ್ಟೆಮನೆ ಪ್ರೇಮಾ, ಮಹಿಳಾ ಒಕ್ಕೂಟದ ಕಾರ್ಯದರ್ಶಿ ಬಾರನ ಶೋಭಾ, ಖಜಾಂಚಿ ಕೋಳಿಬೈಲು ಹರಿಣಿ, ಕುದುಪಜೆ ರೋಹಿಣಿ, ಪೇರಿಯನ ಮುತ್ತಮ್ಮ, ಪಾಣತ್ತಲೆ ಭಾಗೀರಥಿ, ಮುದ್ಯನ ಜ್ಯೊತಿ, ಕರ್ಣಯ್ಯನ ಪದ್ಮಿನಿ, ದೇಲಂಪಾಡಿ ರಮ್ಯ ಚಿಣ್ಣಪ್ಪ, ಕಡ್ಲೇರ ಆಶಾ ಧರ್ಮಪಾಲ, ರಮ್ಯಾ, ಪರ್ಲಕೋಟಿ ಸೋನಾ ಪ್ರೀತು ಮತ್ತಿತರರು ಇದ್ದರು.