ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೆರೆ ಹಿಡಿದ ಪುಂಡಾನೆ. 
ಕೊಡಗು

ಸರೆ ಸಿಕ್ಕ ಪುಂಡಾನೆ ದುಬಾರೆ ಶಿಬಿರಕ್ಕೆ

ಸಿದ್ದಾಪುರ:

ಕಾಡಾನೆ ಸೆರೆ ಕಾರ್ಯಾಚರಣೆಯ ಎರಡನೇ ದಿನವಾದ ಬುಧವಾರ ಸುಮಾರು 35 ವರ್ಷದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.

ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಆರು ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲಾಯಿತು. ಸುಮಾರು 120 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು. ಸೆರೆ ಸಿಕ್ಕ ಆನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಕಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಪ್ರದೇಶದಲ್ಲಿ ಒಟ್ಟು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಆದೇಶ ನೀಡಲಾಗಿದ್ದು, ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ. ಒಂದು ದಿನದ ಬಿಡುವಿನ ಬಳಿಕ ಉಳಿದ ಎರಡು ಆನೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ನೇತೃತ್ವವನ್ನು ವಿರಾಜಪೇಟೆ ಡಿಎಫ್‌ಒ ವಿನೀತಾ ಜಿ.ಚೌಹಾಣ್, ಎಸಿಎಫ್ ತಹಸೀನ್ ಬಾನು, ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ವಲಯ ಅರಣ್ಯಾಧಿಕಾರಿ ಶ್ರೀರಾಮ್ ವಹಿಸಿದ್ದರು. ಪಶುವೈದ್ಯರಾದ ಮುಜೀಬ್ ಹಾಗೂ ಆದರ್ಶ್, ಶೂಟರ್‌ಗಳು, ಆರ್‌ಆರ್‌ಟಿ ಸಿಬ್ಬಂದಿ, ಆನೆ ಕಾರ್ಯಪಡೆ ಸಿಬ್ಬಂದಿ ಹಾಗೂ ದುಬಾರೆಯಿಂದ ಆಗಮಿಸಿದ್ದ ಮಾವುತರು ಭಾಗವಹಿಸಿದ್ದರು.