ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾಹಿತಿ ಕರಪತ್ರ ಬಿಡುಗಡೆ ಮಾಡಲಾಯಿತು. ಕಾವ್ಯಶ್ರೀ, ಆರ್. ವಿಕ್ರಮ್, ಮೇಪಾಡಂಡ ಸವಿತಾ ಕೀರ್ತನ್ ಮತ್ತಿತರರು ಇದ್ದರು.
ಪಾರ್ಶ್ವವಾಯು ಸಂಭವಿಸಿದ ತಕ್ಷಣವೇ 4.5 ಗಂಟೆಗಳ ಒಳಗೆ ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಮಹತ್ವದ ಸಂಗತಿ ಆಗಿದೆ ಎಂದು ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ವಾಕ್ ಮತ್ತು ಶ್ರವಣ ಚಿಕಿತ್ಸಕಿ ಕಾವ್ಯಶ್ರೀ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಇವರ ವತಿಯಿಂದ ನಗರದ ಕಾನ್ವೆಂಟ್ ಜಂಕ್ಷನ್ ಅಂಗನವಾಡಿ ಕೇಂದ್ರದಲ್ಲಿ ಮಡಿಕೇರಿ ನಗರದ ಅಂಗನವಾಡಿ ಶಿಕ್ಷಕರಿಗಾಗಿ ಶನಿವಾರ ಏರ್ಪಡಿಸಿದ್ದ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾರ್ಶ್ವವಾಯು ತಡೆಯಲು ರಕ್ತದೊತ್ತಡ, ಮಧುಮೇಹಕ್ಕೆ ನಿಯಮಿತವಾಗಿ ಔಷಧ ಸೇವಿಸಬೇಕು. ತೀವ್ರ ಶೀತ ವಾತಾವರಣಕ್ಕೆ ಹೆಚ್ಚು ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ಮೂರ್ಚೆ ಬಂದಾಗ ಕೈಯಲ್ಲಿ ಕೀಲಿಕೈ ಕೊಡುವುದು ಎಂಬುದು ಭ್ರಮೆ. ಉಸಿರಾಟಕ್ಕೆ ಸಾಕಷ್ಟು ಜಾಗ ಕಲ್ಪಿಸುವುದು ಮತ್ತು ಹಲ್ಲುಗಳ ಮಧ್ಯದಲ್ಲಿ ಮೃದುವಾದ ಬಟ್ಟೆ ಇಡುವುದು ಅಗತ್ಯ. ಟೆನ್ಶನ್ ಟೈಪ್ ಹೆಡೇಕ್, ಮೈಗ್ರೇನ್ ತಲೆನೋವು ತಪ್ಪಿಸಲು ಸರಿಯಾದ ಆಹಾರ ಸೇವನೆ ಮತ್ತು ಒತ್ತಡ ನಿರ್ವಹಣೆ ಅಗತ್ಯ.
ಮರೆವು ರೋಗದ ಆರಂಭಿಕ ಲಕ್ಷಣಗಳಾಗಿ ತಮ್ಮದೇ ಹೆಸರನ್ನು ಮರೆತುಬಿಡುವುದು, ಸ್ಥಳಗಳನ್ನು ಗುರುತಿಸಲು ಆಗದಿರುವುದು, ಮನೆಯಲ್ಲಿ ವಸ್ತುಗಳನ್ನು ಇಟ್ಟ ಸ್ಥಳವನ್ನು ಮರೆತಿರುವುದು ಕಂಡು ಬರುತ್ತದೆ. ಎಲ್ಲಾ ನರವೈಜ್ಞಾನಿಕ ಅಸ್ವಸ್ಥತೆಗಳ ಸಂದಭ್ ಫಿಸಿಯೋಥೆರಪಿ, ಮಾತು ಮತ್ತು ಭಾಷಾ ಚಿಕಿತ್ಸೆ, ಮಾನಸಿಕ ಸಲಹೆ, ನರ್ಸಿಂಗ್ ಆರೈಕೆಗಳು ಮಹತ್ವ ಪಡೆದುಕೊಂಡಿವೆ ಎಂದರು.
ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದ ಕೊಡಗು ಜಿಲ್ಲಾ ಸಂಯೋಜಕ ಆರ್. ವಿಕ್ರಮ್ ಕಾರ್ಯಕ್ರಮದ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ಮಡಿಕೇರಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕರು, ಫಲಾನುಭವಿಗಳು ಪಾಲ್ಗೊಂಡಿದ್ದರು.