ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ತ್ಯಾಜ್ಯ ನೀರನ್ನು ಚರಂಡಿ ಮೂಲಕ ನದಿಗೆ ಬಿಡುತ್ತಿರುವುದು 
ಕೊಡಗು

ಕಾವೇರಿ ನದಿ ದಡದಲ್ಲಿ ತ್ಯಾಜ್ಯದ ರಾಶಿ

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆಯಬಗ್ಗೆ ಜಿಲ್ಲಾಡಳಿತ ಮೌನ
  • ಸಿದ್ದಾಪುರ,ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಕಸ ವಿಲೇವಾರಿ ಕೊರತೆ
ಸಿದ್ದಾಪುರ: ಕೋಟ್ಯಾಂತರ ಜನರ ಜೀವನಾಡಿಯಾಗಿರುವ ಕಾವೇರಿ ನದಿ ತವರಿನಲ್ಲೇ ಕಲುಷಿತಗೊಳ್ಳುತ್ತಿರುವ ಬಗ್ಗೆ ಸ್ಥಳೀಯರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ,ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆಯ ಕೊರತೆಯಿಂದಾಗಿ ನದಿ ದಡ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ರಾಶಿಗಳು ಹೆಚ್ಚಾಗುತ್ತಿದ್ದು, ಇದರಿಂದ ನದಿ ನೀರಿನ ಗುಣಮಟ್ಟ ಹದಗೆಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯರ ಪ್ರಕಾರ, ಗ್ರಾಮಗಳ ಚರಂಡಿಯ ಕಲುಷಿತ ನೀರು ನೇರವಾಗಿ ನದಿಗೆ ಸೇರುತ್ತಿದೆ. ಇದರ ಪರಿಣಾಮವಾಗಿ ಜಲಚರಗಳ ಜೀವಚಕ್ರ ಹಾನಿಗೊಳಗಾಗುತ್ತಿದೆ ಎಂದು ಪರಿಸರ ಹೋರಾಟಗಾರರು ಎಚ್ಚರಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಬದ್ಧವಾಗಿರಬೇಕಾದ ಸ್ಥಳೀಯ ಸಂಸ್ಥೆಗಳು ಸ್ವಚ್ಛತೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ವಾರ್ಷಿಕ ಪರಿಶೀಲನೆಗಳಲ್ಲಿ ಕೆಲವು ಪ್ರದೇಶಗಳಲ್ಲಿ ನದಿ ನೀರು ಜಾನುವಾರುಗಳಿಗೆ ಸಹ ಯೋಗ್ಯವಲ್ಲ ಎಂಬ ಸೂಚನೆ ನೀಡಿದ್ದರೂ, ಮುಂಜಾಗ್ರತಾ ಕ್ರಮಗಳಲ್ಲಿ ಸ್ಪಷ್ಟತೆ ಕಾಣಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ನದಿ ದಡದಲ್ಲಿ ತ್ಯಾಜ್ಯ ರಾಶಿಗಳು ಹೆಚ್ಚುತ್ತಿರುವುದು ಸಾರ್ವಜನಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯಕೀಯ ವಲಯಗಳು ಎಚ್ಚರಿಸುತ್ತಿವೆ.
ಗ್ರಾಮದ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ತ್ಯಾಜ್ಯದ ದುರ್ವಾಸನೆ ನಡುವೆ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ಪ್ರವಾಸಿಗರಿಗೂ ಅಸೌಕರ್ಯ ಉಂಟಾಗುತ್ತಿದ್ದು, ಪ್ರದೇಶದ ಪರಿಸರ ಮಾನದಂಡಗಳ ಬಗ್ಗೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ ಎಂದು ಸ್ಥಳೀಯರು ವಿಷಾದ ವ್ಯಕ್ತಪಡಿಸಿದ್ದಾರೆ.
ಹಿಂದೆ ಡಾಮಿನೋಸ್ ಯುವಕ ಸಂಘದ ಕಾರ್ಯಕರ್ತರು ನದಿ ದಡವನ್ನು ಸ್ವಚ್ಛಗೊಳಿಸಿ ಹೂವಿನ ಗಿಡಗಳನ್ನು ನೆಟ್ಟು ಪರಿಸರ ಸುಂದರೀಕರಣಕ್ಕೆ ಮುಂದಾಗಿದ್ದರು. ಆದರೆ ನಿರಂತರ ಪಾಲನೆಗೆ ಪಂಚಾಯಿತಿಯಿಂದ ಅಗತ್ಯ ಸಹಕಾರ ಲಭ್ಯವಾಗದ ಕಾರಣ ಆ ಪ್ರಯತ್ನಗಳು ಸ್ಥಿರವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ನಡೆಯುತ್ತಿದ್ದ ಸ್ವಚ್ಛತಾ ಅಭಿಯಾನಗಳು ಆಡಳಿತಾತ್ಮಕ ಬೆಂಬಲದ ಕೊರತೆಯಿಂದ ದುರ್ಬಲಗೊಂಡಿವೆ.
ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಸ್ಥಳ ಗುರುತಿಸದಿರುವುದು ಸಮಸ್ಯೆಯ ಮೂಲ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸದಿದ್ದರೆ ನದಿ ಪರಿಸರದ ಮೇಲೆ ಪರಿಣಾಮ ಹೆಚ್ಚಾಗಲಿದೆ ಎಂದು ಪರಿಸರ ತಜ್ಞರು ಸೂಚಿಸಿದ್ದಾರೆ.