ಅಮ್ಮತ್ತಿ-ಒಂಟಿಯಂಗಡಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಕಾಣಿಸಿಕೊಂಡ ಒಂಟಿ ಸಲಗ. 
ಕೊಡಗು

ಅಮ್ಮತ್ತಿ-ಒಂಟಿಯಂಗಡಿ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಸಿದ್ದಾಪುರ: ವಿರಾಜಪೇಟೆ ತಾಲೂಕಿನ ಅಮ್ಮತ್ತಿ-ಒಂಟಿಯಂಗಡಿ ಮುಖ್ಯ ರಸ್ತೆಯಲ್ಲಿ ಗುರುವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಒಂಟಿ ಸಲಗ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಉಂಟು ಮಾಡಿತು.
ಒಂಟಿ ಸಲಗ ರಸ್ತೆ ದಾಟುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಆನೆ ಸಮೀಪದ ಕಾಫಿ ತೋಟಕ್ಕೆ ತೆರಳಿತು. ತೋಟದಲ್ಲಿ ತಂಗಿರುವ ಒಂಟಿ ಸಲಗವನ್ನು ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಕಾಡಿಗೆ ಅಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಮನೆಯ ಮೇಲೆ ಕಾಡಾನೆ ದಾಳಿ
ಸಿದ್ದಾಪುರ ಸಮೀಪದ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡರೇಷ್ಮೆ ಹಾಡ್ಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮನೆಗೆ ಹಾನಿಯಾಗಿದೆ.
ಗ್ರಾಮದ ನಿವಾಸಿ ಪಿ.ಸಿ.ಪಾಪು ಎಂಬುವರ ಮನೆಯ ಮೇಲೆ ಗುರುವಾರ ಬೆಳಗ್ಗೆ 5.30 ಗಂಟೆ ವೇಳೆಗೆ ಕಾಡಾನೆ ದಾಳಿ ಮಾಡಿದೆ. ಇದರಿಂದ ಗೋಡೆ ಸೇರಿದಂತೆ ಹಲವೆಡೆ ಹಾನಿಯಾಗಿದೆ. ಮನೆಯೊಳಗೆ ಮಲಗಿದ್ದ ಪಾಪು ಹಾಗೂ ಕುಟುಂಬಸ್ಥರು ತಕ್ಷಣ ಎಚ್ಚರಗೊಂಡು ಮನೆಯಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಮನೆಯ ಕೆಲವು ಭಾಗಗಳಿಗೆ ಹಾನಿಯಾಗಿದ್ದು ಕುಟುಂಬಸ್ಥರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.