ಶನಿವಾರಸಂತೆಯಲ್ಲಿ 4ನೇ ವರ್ಷದ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
- ಹನುಮ ಜಯಂತಿ
- ಶ್ರೀ ವೀರಾಂಜನೇಯ ಸೇವಾ ಸಮಿತಿ
ಶನಿವಾರಸಂತೆ: ಹನುಮ ಜಯಂತಿ ಪ್ರಯುಕ್ತ ಶ್ರೀ ವೀರಾಂಜನೇಯ ಸೇವಾ ಸಮಿತಿಯಿಂದ ಆಯೋಜಿಸಿದ್ದ 4ನೇ ವರ್ಷದ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಕೆಆರ್‌ಸಿ ಹಾಗೂ ಗುಡುಗಳಲೆ ವೃತ್ತದಲ್ಲಿ ಕೇಸರಿ ಬಣ್ಣದ ತಳಿರು ತೋರಣ ರಾರಾಜಿಸುತ್ತಿತ್ತು. ಜತೆಗೆ ವಿದ್ಯುತ್ ದೀಪಾಲಂಕಾರದಿಂದ ವೃತ್ತಗಳು ಕಂಗೊಳಸಿಸುತ್ತಿದ್ದವು.
ಪಟ್ಟಣದ ತ್ಯಾಗರಾಜ ಕಾಲನಿಯಲ್ಲಿರುವ ಶ್ರೀ ಚೌಡೇಶ್ವರಿ ಬನದಲ್ಲಿ ಗೋಪೂಜೆ ನಂತರ ಶೋಭಾಯಾತ್ರೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಹೋಮ, ಮಹಾಪೂಜೆ ಮತ್ತು ಮಹಾಮಂಗಳಾರತಿ ನಡೆಯಿತು. ನಂತರ ರಾತ್ರಿ ಶೋಭಯಾತ್ರಾ ಮೆರವಣಿಗೆ ನಡೆಯಿತು. ಪಟ್ಟಣದ ಮುಖ್ಯರಸ್ತೆ ಮೂಲಕ ಗುಡುಗಳಲೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನ ತಲುಪಿದ ಮೆರವಣಿಗೆ ಶನಿವಾರಸಂತೆ ಬೈಪಾಸ್ ರಸ್ತೆ ಮೂಲಕ ವಾಪಸಾಗಿ ಪಟ್ಟಣದ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿ ಮಂಟಪದಲ್ಲಿ ಅಂತ್ಯವಾಯಿತು.
ಮೆರವಣಿಗೆಯಲ್ಲಿ ನಂದಿ ಧ್ವಜ, ಬೆಳ್ಳಿರಥ, ನಾಸಿಕ್ ಬ್ಯಾಂಡ್, ಚಂಡೆವಾದ್ಯದೊಂದಿಗೆ ಡಿಜೆ ಸದ್ದಿಗೆ ಯುವ ಸಮುದಾಯ ಕುಣಿದು ಕುಪ್ಪಳಿಸಿತು. ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಸಂಘಟಕರು ಎಚ್ಚರಿಕೆ ವಹಿಸಿದ್ದರು. ಕೆಆರ್‌ಸಿ ವೃತ್ತದಲ್ಲಿ ಅನ್ನಸಂತರ್ಪಣೆ ಮಾಡಲಾಯಿತು. ಸುಮಾರು 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.