ಸೋಮವಾರಪೇಟೆ ತಾಲೂಕಿನ ಕೂತಿ ಗ್ರಾಮದಲ್ಲಿ ಸುಗ್ಗಿ ಪೂಜೆ ನಡೆಯಿತು. 
ಕೊಡಗು

ಕೂತಿ ಗ್ರಾಮದಲ್ಲಿ ವಿಜೃಂಭಣೆಯ ಸುಗ್ಗಿ ಹಬ್ಬ

ಸೋಮವಾರಪೇಟೆ: ಕೂತಿನಾಡು ಸುಗ್ಗಿಯ ಅಂಗವಾಗಿ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ರಾತ್ರಿ ಸುಗ್ಗಿ ದೊಡ್ಡ ಹಬ್ಬ ವಿಜೃಂಭಣೆಯಿಂದ ಶನಿವಾರ ರಾತ್ರಿ ನಡೆಯಿತು.
ಸಂಪ್ರದಾಯದಂತೆ ಗ್ರಾಮದ ಕುಟುಂಬಗಳ ಸದಸ್ಯರು ದೊಡ್ಡ ದೀಪಗಳನ್ನು ದೇವಿಯ ಕಟ್ಟೆಗೆ ತಂದು, ಕಟ್ಟೆ ಸುತ್ತ ದೇವಿಯ ಹೆಸರಿನಲ್ಲಿ ಕುಣಿದು ಹಬ್ಬ ಆಚರಿಸಿದರು.
ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್.ಎಂ.ಜಯರಾಮ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಕಾರ್ಯದರ್ಶಿ ಯಾದವ್‌ಕುಮಾರ್, ಖಜಾಂಚಿ ಲಕ್ಷ್ಮಯ್ಯ ಸೇರಿದಂತೆ ಅಶ್ವತ್ಥ್, ರಜಿತ್, ಪ್ರದೀಪ್‌ಕುಮಾರ್, ಭರತ್ ಇದ್ದರು.
ಸೋಮವಾರ ನಗರಳ್ಳಿಯಲ್ಲಿ ಹಗಲು ಸುಗ್ಗಿ:ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಉತ್ಸವ ಎಂದೇ ಪ್ರಸಿದ್ಧವಾಗಿರುವ ನಗರಳ್ಳಿ ಸುಗ್ಗಿ ಏ.6 ರಂದು ಬೆಗ್ಗೆ ಸುಗ್ಗಿ ಬನದಲ್ಲಿ ನಡೆಯಲಿದೆ. ಕೂತಿ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೀಕಳ್ಳಿ ಸೇರಿದಂತೆ ಒಟ್ಟು 18 ಗ್ರಾಮಗಳ ಭಕ್ತರು ಒಂದೆಡೆ ಸೇರಿ ಸಂಪ್ರದಾಯಬದ್ಧ ಪೂಜಾ, ವಿಧಿ-ವಿಧಾನಗಳನ್ನು ನೆರವೇರಿಸಲಿದ್ದಾರೆ.
ಕಂಬತ್ತಳೆ ಬನ, ಸುಗ್ಗಿ ಬನ ಹಾಗೂ ಬಿಲ್ಲೆ ರಂಗ ಬನಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಬಿಲ್ಲೆ ರಂಗದಲ್ಲಿ ಮದುವೆಗೆ ಕಾಣಿಕೆ ಒಪ್ಪಿಸುವವರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಲು ಆಡಳಿತ ಮಂಡಳಿ ಮನವಿ ಮಾಡಿದೆ.