ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುಮ್ಮನಕೊಲ್ಲಿಯಲ್ಲಿ ಹಮ್ಮಿಕೊಂಡಿದ್ದ ಶರಣ ತತ್ವ ಚಿಂತನಾ ಗೋಷ್ಠಿಯನ್ನು ನಿವೃತ್ತ ಶಿಕ್ಷಕ ಹೆಚ್.ಎಂ.ಪ್ರಕಾಶ್ ಉದ್ಘಾಟಿಸಿದರು. ಮೆ.ನಾ. ವೆಂಕಟನಾಯಕ್, ಟಿ.ಜಿ. ಪ್ರೇಮಕುಮಾರ್, ಹೆಚ್.ಟಿ. ವಸಂತ್, ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು
ಹನ್ನೆರಡನೇ ಶತಮಾನದಲ್ಲಿ ಜನಸಾಮಾನ್ಯರ ವಿರುದ್ಧ ಮೂಲಭೂತವಾದಿಗಳು ಸೃಷ್ಟಿಸಿದ್ದ ಅಮಾನವೀಯ, ಅಸಮಾನತೆ, ಮೂಢನಂಬಿಕೆಗಳನ್ನು ಎದುರಿಸಲು ಸೃಷ್ಟಿಯಾದ ವಚನ ಸಾಹಿತ್ಯ ಮನುಷ್ಯನ ನೆಮ್ಮದಿ ಹಾಗೂ ಸ್ವಾಭಿಮಾನದ ಬದುಕಿಗೆ ಹಚ್ಚಿದ ಹಣತೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರೂ ಆದ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ. ವೆಂಕಟನಾಯಕ್ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗುಮ್ಮನಕೊಲ್ಲಿಯ ಶರಣ ಹೆಚ್.ಎಂ. ಪ್ರಕಾಶ್ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಶರಣ ತತ್ವ ಚಿಂತನಾ ಗೋಷ್ಠಿಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹನ್ನೆರಡನೇ ಶತಮಾನದ ವಚನ ಚಳವಳಿ ನಿಂತ ನೀರಾಗದೆ ಜಂಗಮ ರೂಪಿಯಾಗಿ ಪ್ರಸರಿಸಿತು. ಕಾಯಕ ಮತ್ತು ದಾಸೋಹ ಎಂಬ ವಿನೂತನ ಪರಿಕಲ್ಪನೆಗಳು, ಗಳಿಸಿದ್ದರಲ್ಲಿ ಒಂದAಶವನ್ನು ಸಮಾಜಕ್ಕೆ ಅರ್ಪಿಸಬೇಕೆಂಬ ಸಿದ್ದಾಂತ ಶರಣ ಕ್ರಾಂತಿಗೆ ಅತ್ಯಮೂಲ್ಯ ಕೊಡುಗೆ ನೀಡಿದವು. ಆದರೆ 800 ವರ್ಷಗಳ ಹಿಂದೆ ಶರಣರು ಆಶಿಸಿದ ಸಮ ಸಮಾಜದ ಪರಿಕಲ್ಪನೆ ಇನ್ನೂ ನನಸಾಗದಿರುವುದು ಬೇಸರದ ಸಂಗತಿ ಎಂದರು.
ಕೂಡ್ಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ಶರಣ ಚಳವಳಿಯಲ್ಲಿ ದಾಸೋಹ, ಇಷ್ಟಲಿಂಗ, ಪ್ರಸಾದ, ಅರಿವು, ಭಕ್ತಿ, ಬಯಲು ಮೊದಲಾದ ಪರಿಭಾಷೆಗಳು ವಚನ ಸಾಹಿತ್ಯದ ಭೂಮಿಕೆಯಾಗಿವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಹೆಚ್.ಟಿ. ವಸಂತ್ ಮಾತನಾಡಿ ವಚನ ಸಾಹಿತ್ಯದ ಅಧ್ಯಯನ ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಮೂಲ ಸೂತ್ರವಾಗಿದೆ.
ಬೇಡಿಕೆ, ಉತ್ಪಾದನೆ, ಉಳಿತಾಯ ಮತ್ತು ವಿತರಣೆಗಳ ಸುತ್ತಲೂ ಸುತ್ತದ ಕಾಯಕ ತತ್ವ ಮನೋಕ್ಲೇಷರಹಿತ ದುಡಿಮೆಯಾಗಿ ದೇಹದ ಶ್ರಮವನ್ನು ದೈವತ್ವಕ್ಕೆ ಏರಿಸುವ ಸಾಧನೆಯಾಗುವ ಜತೆಗೆ ಸಮ ಸಮಾಜ ನಿರ್ಮಾಣದ ಮುಖ್ಯ ಮೌಲ್ಯವಾಗಿ ಮಹತ್ವ ಪಡೆದಿದೆ ಎಂದರು.
ಸತತ 32 ವರ್ಷಗಳ ಶಿಕ್ಷಣ ಸೇವೆಯೊಂದಿಗೆ ನಿವೃತ್ತರಾದ ಚಿಕ್ಕತ್ತೂರು ಸರ್ಕಾರಿ ಶಾಲೆಯ ಶಿಕ್ಷಕ ಶರಣ ಹೆಚ್.ಎಂ.ಪ್ರಕಾಶ್ ಹಾಗೂ ಕೂಡಿಗೆ ಡಯಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶರಣೆ ಮನುದೇವಿ ಅವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಹೆಚ್.ಪಿ. ಮಹದೇವ್, ಚಿಕ್ಕತ್ತೂರು ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ, ಕೃಷಿಕರಾದ ಬಸವರಾಜು, ಶರಣ ಸಾಹಿತ್ಯ ಪರಿಷತ್ತು ಕೋಶಾಧಿಕಾರಿ ಕೆ.ಪಿ. ಪರಮೇಶ್, ಕಾರ್ಯದರ್ಶಿ ಬಿ. ನಟರಾಜು, ಶಿಕ್ಷಕರಾದ ರಾಮಚಂದ್ರಮೂರ್ತಿ, ವೈ.ಸಿ. ಕುಮಾರ್, ಉದಯಪ್ರಕಾಶ್, ರೇಖಾ, ಬಿ.ಲೋಕೇಶ್ ಇದ್ದರು.