ಮಳೆ ಕೊರತೆಯಿಂದ ಭತ್ತದ ನಾಟಿ ಕಾರ್ಯಕ್ಕೆ ಇನ್ನೂ ಸಿದ್ಧವಾಗದ ಗದ್ದೆ 
ಕೊಡಗು

ಕೃಷಿ ಚಟುವಟಿಕೆಗೆ ಕವಿದ ಕಾರ್ಮೋಡ

ಮಡಿಕೇರಿ:
ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗಿನಲ್ಲೇ ಈ ವರ್ಷ ಭಾರಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ಜೂನ್‌ನಲ್ಲಿ ಮೈತುಂಬಿ ಹರಿಯಬೇಕಿದ್ದ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟ ಬೇಸಿಗೆಯಲ್ಲಿ ಇರುವಂತೆ ಕಂಡುಬರುತ್ತಿದೆ. ಇದರ ನೇರ ಪರಿಣಾಮ ಕೃಷಿಯ ಮೇಲಾಗಿದ್ದು, ಬಿತ್ತನೆ ಕಾರ್ಯ ಕುಂಠಿತಗೊAಡಿದೆ. ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆ ಕಾಫಿ ಮೇಲೂ ಪರಿಣಾಮ ಬೀರಿದೆ.
ಜೂನ್ ತಿಂಗಳು ಮುಗಿಯುತ್ತಾ ಬಂದರೂ ಕೊಡಗಿನಲ್ಲಿ ಮಳೆಗಾಲದ ಲಕ್ಷಣಗಳೇ ಕಂಡುಬರುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ತುಂತುರು ಮಳೆ, ಮೋಡಕವಿದ ವಾತಾವರಣ ಹೊರತುಪಡಿಸಿದರೆ ದಿನಪೂರ್ತಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಈ ವರ್ಷ ಇಲ್ಲಿಯ ತನಕ ಕೇವಲ 305 ಮಿಮೀ ಮಾತ್ರ ಮಳೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,300 ಮಿ.ಮೀನಷ್ಟು ಮಳೆ ದಾಖಲಾಗಿತ್ತು. ನಿಗದಿತ ಸಮಯದಲ್ಲಿ ಮಳೆ ಆಗದ ಕಾರಣ ಜೀವನದಿ ಕಾವೇರಿ ಸೇರಿದಂತೆ ಕೊಡಗಿನ ಎಲ್ಲಾ ನದಿಗಳಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಬೇಸಿಗೆಗೂ ಈಗಿನ ಸ್ಥೀತಿಗೂ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಆಗಿರುವ ಕುಶಾಲನಗರ ತಾಲೂಕು ಹಾರಂಗಿ ಅಣೆಕಟ್ಟೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 24.5 ಅಡಿಗಳಷ್ಟು ನೀರಿನ ಸಂಗ್ರಹ ಪ್ರಮಾಣ ಕಡಿಮೆ ಆಗಿದೆ. 2,859 ಅಡಿ ಎತ್ತರದ ಹಾರಂಗಿ ಅಣೆಕಟ್ಟೆಯಲ್ಲಿ ಶನಿವಾರದ ಮಾಹಿತಿ ಪ್ರಕಾರ 2,826.32 ಅಡಿಗಳಷ್ಟು ಮಾತ್ರ ನೀರಿದೆ. ಕಳೆದ ವರ್ಷ ಇದೇ ದಿನ 2,850.84 ಅಡಿಗಳಷ್ಟು ನೀರಿತ್ತು. ಪ್ರಸ್ತುತ ಜಲಾಶಯಕ್ಕೆ ಕೇವಲ 338 ಕ್ಯೂಸೆಕ್ ಮಾತ್ರ ನೀರಿನ ಒಳಹರಿವು ಇದೆ. ನದಿಗೆ 180 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಾಲುವೆಗೆ ಯಾವುದೇ ನೀರು ಬಿಡುತ್ತಿಲ್ಲ. ಕಳೆದ ವರ್ಷ ಇದೇ ದಿನ 7,445 ಕ್ಯೂಸೆಕ್‌ನಷ್ಟು ನೀರಿನ ಒಳಹರಿವು ಇತ್ತು. ನದಿಗೆ 7,833 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 3.150 ಟಿಎಂಸಿ ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 6.104 ಟಿಎಂಸಿ ನೀರಿನ ಸಂಗ್ರಹ ಇತ್ತು.
ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು 1,34,895 ಎಕರೆ ಅಚ್ಚುಕಟ್ಟು ಪ್ರದೇಶ ಹಾರಂಗಿ ಜಲಾಶಯದ ನೀರಾವರಿಯನ್ನೇ ಅವಲಂಬಿಸಿದೆ. ಇಷ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆÀಯಲು ವರ್ಷಕ್ಕೆ 18 ಟಿಎಂಸಿ ನೀರು ಬೇಕಾಗುತ್ತದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯ 2 ಬಾರಿ ಗರಿಷ್ಠ ಪ್ರಮಾಣದಲ್ಲಿ ಭರ್ತಿ ಆದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ಸಮೃದ್ಧ ಬೆಳೆ ತೆಗೆಯಬಹುದು. ಕಳೆದ ವರ್ಷ ಜಲಾಶಯಕ್ಕೆ ಒಟ್ಟು 45.312 ಟಿಎಂಸಿ ನೀರು ಹರಿದು ಬಂದಿತ್ತು. ಈ ವರ್ಷ ಮಳೆಯ ಕೊರತೆಯಿಂದಾಗಿ ಕೇವಲ 0.675 ಟಿಎಂಸಿ ನೀರು ಮಾತ್ರ ಇಲ್ಲಿಯ ತನಕ ಬಂದಿದೆ. ಹಾಗಾಗಿ ನೀರಾವರಿ ಆಶ್ರಿತ ಭತ್ತದ ಬೇಸಾಯದ ಮೇಲೆ ಈ ಬಾರಿ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ.
ಮತ್ತೊಂದು ಕಡೆ ಜಿಲ್ಲೆಯಲ್ಲಿ ಬಹುತೇಕ ಭತ್ತ ಬೇಸಾಯ ಮಳೆಯಾಶ್ರಿತÀವಾಗಿದ್ದು ಮಳೆಯ ಕೊರತೆ ಅಕ್ಕಿ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಒಂದೊಮ್ಮೆ ಭತ್ತದ ಕಣಜ ಎಂದೇ ಗುರುತಿಸಲಾಗುತ್ತಿದ್ದ ಜಿಲ್ಲೆಯಲ್ಲಿ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಕಾಡುಪ್ರಾಣಿಗಳ ಹಾವಳಿ, ಹವಾಮಾನ ವೈಪರೀತ್ಯ, ಕೃಷಿ ಕಾರ್ಮಿಕರ ಕೊರತೆ, ಕಾಫಿ, ಅಡಿಕೆ ಹಾಗೂ ಶುಂಠಿ ಕೃಷಿಯತ್ತ ಆಕರ್ಷಣೆ ಕಾರಣದಿಂದ ವರ್ಷದಿಂದ ವರ್ಷಕ್ಕೆ ಭತ್ತದ ಬೆಳೆಯು ಪ್ರದೇಶ ಕಡಿಮೆ ಆಗುತ್ತಿದ್ದು 2025-26ನೇ ಸಾಲಿನಲ್ಲಿ ಕೃಷಿ ಇಲಾಖೆ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಂಡಿತ್ತು. ಆದರೆ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ಮಾಡಲಾಗಿತ್ತು. ಈ ವರ್ಷ ಈ ಪ್ರಮಾಣ ಇನ್ನೂ ಕಡಿಮೆ ಆಗುವ ಸಾಧ್ಯತೆಗಳಿವೆ.
ಕಾಫಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ದೇಶದಲ್ಲೇ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ಪ್ರಮುಖವಾಗಿ ರೋಬಸ್ಟಾ ಮತ್ತು ಅರೇಬಿಕಾ ತಳಿಗಳನ್ನು ಬೆಳೆಯಲಾಗುತ್ತದೆ. ಮಳೆಯ ಕೊರತೆ ಕಾಫಿ ಮೇಲೂ ಪರಿಣಾಮ ಉಂಟುಮಾಡಿದೆ. ಗಿಡಗಳನ್ನು ಕಾಪಾಡಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಸರಿಯಾಗಿ ಕಾಯಿ ಕಟ್ಟದೆ ಕಾಫಿ ಹಣ್ಣುಗಳು ಸರಿಯಾಗಿ ಪಕ್ವವಾಗುವುದಿಲ್ಲ. ಕಾಫಿ ತೋಟಗಳಿಗೆ ಕೃತಕವಾಗಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲು ಹಳ್ಳ-ಕೊಳ್ಳಗಳಲ್ಲಿ ನೀರಿಲ್ಲದೆ ಬೆಳೆಗಾರರು ಪರದಾಡುವಂತಾಗಿದೆ. ಕಾಂಡಕೊರಕ ಹುಳುವಿನ ಹಾವಳಿಯೂ ಹೆಚ್ಚಾಗಿದೆ. ಹಾಗಾಗಿ ಈ ವರ್ಷ ಕಾಫಿ ಇಳುವರಿಯಲ್ಲಿ ಶೇ. 30 ರಿಂದ 40 ರಷ್ಟು ಭಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ.
ಕಪ್ಪು ಚಿನ್ನ ಎಂದೇ ಕರೆಯಲಾಗುವ ಕಾಳುಮೆಣಸು ಕಾಫಿ ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯಲಾಗುತ್ತದೆ. ತೇವಾಂಶದ ಕೊರತೆ ಕಾಳಿಮೆಣಸು ಬಳ್ಳಿಗಳ ಮೇಲೆ ಪರಿಣಾಮ ಬೀರುತ್ತಿದ್ದು. ಬುಡಸಮೇತ ಒಣಗುವುದು ಸಾಮಾನ್ಯವಾಗಿದೆ. ಬಳ್ಳಿಗಳಿಗೆ ಬೇರು ಕೊಳೆ ರೋಗ ಮತ್ತು ದ್ರುತ ಸೊರಗು ರೋಗ ತಗಲುತ್ತಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ. ವಾಣಿಜ್ಯ ಬೆಳೆಗಳಾದ ಶುಂಠಿ ಮತ್ತು ಅಡಿಕೆಗೂ ನೀರಿನ ಅಭಾವ ತಟ್ಟಿದೆ. ಶುಂಠಿ ಬೆಳೆಗೆ ನಿರಂತರ ತೇವಾಂಶದ ಅಗತ್ಯವಿದ್ದು, ಮಳೆ ಇಲ್ಲದೆ ಗಡ್ಡೆ ಕೊಳೆಯುವ ರೋಗ ಹಾಗೂ ಬೆಳವಣಿಗೆ ಕುಂಠಿತಗೊಳ್ಳುವ ಸಮಸ್ಯೆ ಕಾಣಿಸಿಕೊಂಡಿದೆ. ತೋಟಗಳಲ್ಲಿ ಅಡಿಕೆ ಮರಗಳು ಸೂರ್ಯನ ತಾಪಕ್ಕೆ ಸುಟ್ಟು ಹಳದಿ ಬಣ್ಣಕ್ಕೆ ತಿರುಗುತ್ತಿವೆ.
ಕೊಡಗು ಪ್ರವಾಸಿ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದರೂ ಶೇ.70 ಕ್ಕಿಂತ ಹೆಚ್ಚು ಜನಸಂಖ್ಯೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿಯನ್ನೇ ನಂಬಿಕೊAಡಿದೆ. ಮಳೆಯ ಕೊರತೆ ಇವರ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ. ಈ ಮಳೆ ಕೊರತೆ ಕೇವಲ ಈ ವರ್ಷದ ಬೆಳೆ ನಷ್ಟಕ್ಕೆ ಸೀಮಿತವಾಗಿಲ್ಲ. ಇದು ಮುಂದಿನ ವರ್ಷದ ಕೃಷಿ ಚಟುವಟಿಕೆಗಳ ಮೇಲೂ ದೀರ್ಘಕಾಲೀನ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ.
"

ಜೂನ್ ಮುಗಿಯುತ್ತಾ ಬಂದರೂ ಮಳೆ ಸರಿಯಾಗಿ ಬರುತ್ತಿಲ್ಲ. ಇಷ್ಟೊತ್ತಿಗಾಗಲೇ ಭತ್ತದ ಬಿತ್ತನೆ ಕಾರ್ಯ ಮುಗಿಯಬೇಕಿತ್ತು. ಆದರೆ ನೀರಿಲ್ಲದೆ ಬಿತ್ತನೆ ಮಾಡಲು ಆಗಿರಲಿಲ್ಲ. ಆದರೂ ಮಳೆ ಬರಬಹುದು ಎನ್ನುವ ನಂಬಿಕೆಯಿAದ ಒಣಮಣ್ಣಿನ ಪಾತಿ ಮಾಡಿ ಭತ್ತ ಬೀಜ ಬಿತ್ತನೆ ಮಾಡಲಾಗಿದೆ. ದೀರ್ಘಾವಧಿ ಭತ್ತದ ಬಿತ್ತನೆ ಮಾಡಿದ್ದೇವೆ. ಅಲ್ಪಾವಧಿ ಭತ್ತದ ಬಿತ್ತನೆ ಕಾರ್ಯ ಇನ್ನಷ್ಟೇ ಮಾಡಬೇಕಿದೆ. ಏನೇ ಆದರೂ ಈ ವರ್ಷ ರೈತರಿಗೆ ನಷ್ಟವಂತೂ ಖಚಿತ.

— ಬಿ.ಪಿ. ರವಿಶಂಕರ್, ಪ್ರಗತಿಪರ ರೈತ, ಪೊನ್ನಂಪೇಟೆ

"

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಜೂ. 30ರ ತನಕದ ಅವಧಿಯಲ್ಲಿ 2-15 ಮಿಮೀನಷ್ಟು ಅತೀ ಕಡಿಮೆ ಮಳೆ ಬರುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32-33 ಡಿಗ್ರಿ ಸೆಲ್ಸಿಯಸ್ ತನಕ ಇರಲಿದ್ದು, ಕನಿಷ್ಠ ಉಷ್ಣಾಂಶ 20-21 ಡಿಗ್ರಿ ಸೆಲ್ಸಿಯಸ್ ತನಕ ದಾಖಲಾಗುವ ನಿರೀಕ್ಷೆ ಇದೆ. ಆಕಾಶ ಸಂಪೂರ್ಣ ಮೋಡ ಕವಿದ ವಾತಾವರಣದಿಂದ ಕೂಡಿರಲಿದೆ.

— ಡಾ. ಜಿ.ವಿ. ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ, ಮೈಸೂರು

"

ಕಳೆದ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆ ಆಗಿತ್ತು. ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಸುರಿದಿತ್ತು. ಮೇ ತಿಂಗಳಿನಿAದಲೇ ಜಲಾನಯನ ಪ್ರದೇಶದಲ್ಲಿ ಮಳೆಗಾಲ ಆರಂಭವಾದ ರೀತಿಯಲ್ಲಿ ಮಳೆ ಬಂದ ಕಾರಣ ನದಿಗೆ ಒಳಹರಿವು ಹೆಚ್ಚಳ ಆಗಿತ್ತು. ಬೇಸಿಗೆಯಲ್ಲೂ ನೀರಿನ ಸಂಗ್ರಹ ಉತ್ತಮ ಆಗಿತ್ತು. ಹಾಗಾಗಿ ಕಳೆದ ವರ್ಷ ಜೂನ್ ತಿಂಗಳಿನಲ್ಲೇ ಅಣೆಕಟ್ಟೆ ಬಹುತೇಕ ಭರ್ತಿ ಆಗಿತ್ತು.

— ಐ.ಕೆ. ಪುಟ್ಟಸ್ವಾಮಿ, ಇಇ, ಹಾರಂಗಿ ಪುನರ್ವಸತಿ ವಿಭಾಗ, ಕಾವೇರಿ ನೀರಾವರಿ ನಿಗಮ