ಕೊಡಗು  
ಕೊಡಗು

ಕಸ್ತೂರಿರಂಗನ್ ವರದಿ ವಿರುದ್ದ ಆಕ್ಷೇಪಣೆ ಸಲ್ಲಿಸಿ

ಸೋಮವಾರಪೇಟೆ:

ಕಸ್ತೂರಿರಂಗನ್ ವರದಿ ಸಂಬಂಧ ಕೇಂದ್ರ ಸರ್ಕಾರ 7ನೇ ಕರಡು ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು, ಪ್ರತಿ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಿ ಆಕ್ಷೇಪಣೆ ಸಲ್ಲಿಸಬೇಕು ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್ ಮನವಿ ಮಾಡಿದ್ದಾರೆ.

ಕೊಡಗು ಹೆಚ್ಚು ಅರಣ್ಯಪ್ರದೇಶವನ್ನು ಹೊಂದಿರುವುದರೊಂದಿಗೆ ಪುಟ್ಟ ಜಿಲ್ಲೆಯಾಗಿದ್ದು, ಸೂಕ್ಷ್ಮ ಪರಿಸರ ವಲಯಕ್ಕೆ ಸಂಬಂಧಪಟ್ಟಂತೆ ಕಸ್ತೂರಿರಂಗನ್ ವರದಿ ಅನುಷ್ಠಾನಗೊಂಡರೆ ಕೊಡಗಿನ ಬಹುತೇಕ ಗ್ರಾಮಗಳು ಮೀಸಲು ಅರಣ್ಯಗಳಾಗಿ ಪರಿವರ್ತನೆಯಾಗಿ ಜಿಲ್ಲೆಯ ಮೂಲನಿವಾಸಿಗಳು ಪ್ರಾಣಿಗಳಂತೆ ಬದುಕಬೇಕಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಿಡಿಒಗಳು ಗ್ರಾಮಸಭೆಗಳನ್ನು ಏರ್ಪಡಿಸಿ, ಗ್ರಾಮಸ್ಥರ ಅಕ್ಷೇಪಣೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ಬಗ್ಗೆ ಶಾಸಕರು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಕರಡು ಸೂಚನೆಯಲ್ಲಿ ಕೊಡಗು ಜಿಲ್ಲೆಯ 53 ಗ್ರಾಮಗಳು ಸೇರಿವೆ. ಪ್ರತಿ ಮೀಸಲು ಅರಣ್ಯದ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ಸೂಕ್ಷ್ಮಪರಿಸರ ವಲಯ ಇರಲಿದ್ದು, ಜಿಲ್ಲೆಯ ಬಹುತೇಕ ಗ್ರಾಮಗಳು ವ್ಯಾಪ್ತಿಗೆ ಸೇರಲಿವೆ. ಈಗ ಕೊಡಗಿನ ಜನರು ಆಕ್ಷೇಪಣೆ ಸಲ್ಲಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಮೂರು ರಾಜಕೀಯ ಪಕ್ಷಗಳ ನಾಯಕರು ರೈತರ ಹೋರಾಟದಲ್ಲಿ ಭಾಗವಹಿಸಿಬೇಕು. ಪ್ರತಿ ಗ್ರಾಮಗಳಿಗೆ ತೆರಳಿ ವರದಿ ಅನುಷ್ಠಾನಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಕೇವಲ ಚುನಾವಣೆಗಾಗಿ ಗ್ರಾಮಗಳಿಗೆ ಸುತ್ತಿದರೆ ಸಾಲದು, ರೈತರನ್ನು ಗಂಡಾಂತರದಿಂದ ಪಾರು ಮಾಡಲು ತಮ್ಮ ಸಮಯನ್ನು ಮೀಸಲಿಡಬೇಕು. ಮತ ಹಾಕಿದವರ ಋಣ ತೀರಿಸುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ವರದಿ ಅನುಷ್ಠಾನಕ್ಕೆ ಆಕ್ಷೇಪಣೆ ಸಲ್ಲಿಸಲು ಇನ್ನು ಕೇವಲ 52 ದಿನಗಳು ಬಾಕಿ ಉಳಿದಿವೆ ಎಂದು ಹೇಳಿದರು.
ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯನ್ನು ಈ ಹಿಂದೆ ಗ್ರಾಮೀಣ ಜನರು ನಿರ್ಲಕ್ಷ್ಯ ಮಾಡಿದ ಪರಿಣಾಮ ಇಂದು ರೈತರು ಆಸ್ತಿ ಕಳೆದುಕೊಳ್ಳುವ ಸಂಕಷ್ಟದಲ್ಲಿದ್ದಾರೆ. ಕಸ್ತೂರಿರಂಗನ್ ವರದಿ ಅನುಷ್ಠಾನವಾದರೆ ಸರ್ವಸ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜ್, ಹೋರಾಟ ಸಮಿತಿಯ ಪ್ರಮುಖರಾದ ಮಣಿ ಕುಶಾಲಪ್ಪ ಇದ್ದರು.