ಪಿ.ವಿ.ಅಂತೋಣಿ ಸಿದ್ದಾಪುರ
ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಯುವ ಕೃಷಿಕ ಸಿದೇಟ್ಟಿರ ದರ್ಶನ್ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲೇ ಯಶಸ್ಸಿನ ಹಾದಿ ಕಂಡುಕೊಂಡಿದ್ದಾರೆ.
ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಕಾಲೇಜು ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಕೃಷಿ ಕಾಯಕಕ್ಕೆ ಕಾಲಿಟ್ಟ ಅವರು, ಕಾಫಿ, ಕಾಳುಮೆಣಸು, ಅಡಕೆ, ತೆಂಗು, ಬಾಳೆ, ಹಣ್ಣಿನ ಗಿಡಗಳು, ತರಕಾರಿ, ಹೈನುಗಾರಿಕೆ ಹಾಗೂ ನರ್ಸರಿಯನ್ನು ಸಮನ್ವಯಗೊಳಿಸಿ ಕೃಷಿಯನ್ನು ಆದಾಯದ ಹಲವು ಮೂಲಗಳನ್ನಾಗಿ ರೂಪಿಸಿಕೊಂಡಿದ್ದಾರೆ
ವರ್ಷವಿಡೀ ಆದಾಯ ಗಳಿಸುವ ಪ್ರಯತ್ನ: ಸಿದೇಟ್ಟಿರ ಕಾರ್ಯಪ್ಪ ಎಸ್.ಬಿ.ಹಾಗೂ ಪುಷ್ಪವತಿ ಅವರ ಪುತ್ರ ದರ್ಶನ್, ತಮ್ಮ ಸುಮಾರು 6.50 ಎಕರೆ ತೋಟದಲ್ಲಿ ರೋಬಸ್ಟಾ ಹಾಗೂ ಅರೇಬಿಕಾ ಕಾಫಿಯೊಂದಿಗೆ ಕಾಳುಮೆಣಸು, ಅಡಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಉಪಬೆಳೆಗಳನ್ನು ಬೆಳೆಯುತ್ತಿದ್ದಾರೆ. ಒಂದೇ ಬೆಳೆಯ ಮೇಲೆ ಅವಲಂಬಿತರಾಗದೆ ಹಲವು ಕೃಷಿ ಚಟುವಟಿಕೆ ಕೈಗೊಳ್ಳುವ ಮೂಲಕ ವರ್ಷವಿಡೀ ಆದಾಯ ಗಳಿಸುವ ಪ್ರಯತ್ನ ನಡೆಸಿದ್ದಾರೆ.
ದರ್ಶನ್ ಅವರ ಕೃಷಿ ಚಟುವಟಿಕೆಯಲ್ಲಿ ನರ್ಸರಿ ಪ್ರಮುಖ ಆದಾಯ ಮೂಲವಾಗಿದೆ. ಪ್ರತ್ಯೇಕ ಶೆಡ್ ನಿರ್ಮಿಸಿ ಪ್ರತಿವರ್ಷ ಸುಮಾರು 40 ಸಾವಿರ ವಿವಿಧ ತಳಿಯ ಕಾಫಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ರೋಬಸ್ಟಾ ಕಾಫಿಯ ಚಂದ್ರಗಿರಿ, ಕಾಟಿಮಾರ್, ಟಿ.ಆರ್-9 ಹಾಗೂ ಅರೇಬಿಕಾ ಕಾಫಿ ತಳಿಗಳ ಸಸಿಗಳನ್ನು ಬೆಳೆಸಿ ಕೊಡಗಿನ ವಿವಿಧ ಎಸ್ಟೇಟ್‌ಗಳು ಹಾಗೂ ಗ್ರಾಮಗಳ ರೈತರಿಗೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ಕಾಳುಮೆಣಸು, ಅಡಕೆ ಹಾಗೂ ವಿವಿಧ ಹಣ್ಣಿನ ಸಸಿಗಳನ್ನೂ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಪನ್ನೀರು, ಕಲ್ಲುಬಳ್ಳಿ, ಬಡ್ಕನ್, ಶಿವಂ, ಕರಿಮುಂಡ ಸೇರಿದಂತೆ ವಿವಿಧ ಕಾಳುಮೆಣಸು ತಳಿಗಳ ಸಸಿಗಳು ಇವರಲ್ಲಿ ಲಭ್ಯವಿವೆ. ತೀರ್ಥಹಳ್ಳಿ, ನಾಟಿ, ಮಂಗಳ ತಳಿಯ ಅಡಕೆ, ಕಿತ್ತಳೆ, ಕೈಹುಳಿ, ನಿಂಬೆ, ತೆಂಗು, ಬಟರ್‌ಫ್ರೂಟ್, ಪಪ್ಪಾಯ, ಸಪೋಟ, ಸೀಬೆ ಹಾಗೂ ಲಿಚ್ಚಿ ಸಸಿಗಳನ್ನೂ ಬೆಳೆಸುತ್ತಿದ್ದಾರೆ.
ಸಂಸ್ಕರಿಸಿದ ಬಿತ್ತನೆ ಬೀಜ, ಕಪ್ಪು ಮಣ್ಣು, ಜೀವಾಮೃತ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಗೊಬ್ಬರ ತಯಾರಿಸಿ ಜಮೀನು ಹಾಗೂ ನರ್ಸರಿಗೆ ಬಳಸುತ್ತಿದ್ದಾರೆ.
ಹೈನುಗಾರಿಕೆಯಲ್ಲೂ ಯಶಸ್ಸು:
ದರ್ಶನ್ ಹಾಗೂ ಅವರ ಪತ್ನಿ ಗಣಶ್ರೀ ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಾಸ್‌ಬ್ರೀಡ್, ಜರ್ಸಿ ಹಾಗೂ ನಾಟಿ ತಳಿಯ ಹಸುಗಳನ್ನು ಸಾಕುತ್ತಿರುವ ದಂಪತಿ, ಪಶುಸಂಗೋಪನೆಯಿಂದಲೂ ಹಣ ಕಾಣುತ್ತಿದ್ದಾರೆ.
ಪ್ರತಿದಿನ ಮುಂಜಾನೆ ಎದ್ದು ಕೊಟ್ಟಿಗೆ ಸ್ವಚ್ಛಗೊಳಿಸಿ, ಹಸುಗಳಿಗೆ ಸ್ನಾನ ಮಾಡಿಸಿ, ಹಾಲು ಕರೆಯುವುದು ಇವರ ದಿನಚರಿ. ಪ್ರತಿದಿನ 8ರಿಂದ 10 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಲೀಟರ್‌ಗೆ 50ರಂತೆ ಸ್ಥಳೀಯ ಹೋಟೆಲ್‌ಗಳು ಹಾಗೂ ಮನೆಗಳಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ದಿನಕ್ಕೆ ಸರಾಸರಿ 500 ರೂ. ಆದಾಯ ಗಳಿಸುತ್ತಿದ್ದಾರೆ. ಕುಟುಂಬದ ಸದಸ್ಯರೂ ಪಶುಸಂಗೋಪನೆಗೆ ಸಹಕಾರ ನೀಡುತ್ತಿದ್ದಾರೆ.
ಮನೆ ಸಮೀಪ ತರಕಾರಿ ಬೇಸಾಯ:
ಕುಟುಂಬಕ್ಕೆ ಅಗತ್ಯವಿರುವ ತರಕಾರಿಗಳನ್ನು ಮನೆಯ ಸುತ್ತಮುತ್ತಲೇ ಬೆಳೆಯುತ್ತಿದ್ದಾರೆ. ಬೀನ್ಸ್, ಎಲೆಕೋಸು, ಬೆಂಡೆ, ಟೊಮ್ಯಾಟೊ, ಶುಂಠಿ, ಸೌತೆಕಾಯಿ, ಬದನೆಕಾಯಿ, ಮೆಣಸು, ಅರಿಶಿನ, ಬೂದಗುಂಬಳ ಹಾಗೂ ವಿವಿಧ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಕುಟುಂಬದ ತರಕಾರಿ ಅಗತ್ಯ ಪೂರೈಸುವುದರ ಜತೆಗೆ ಮಾರುಕಟ್ಟೆ ಅವಲಂಬನೆಯೂ ಕಡಿಮೆಯಾಗಿದೆ.
ಎಕರೆ ಗದ್ದೆಯಲ್ಲಿ ಫಸಲು: ಕೊಡಗಿನಲ್ಲಿ ಕಾಡಾನೆಗಳ ಹಾವಳಿಯಿಂದ ಭತ್ತ ಕೃಷಿಯಿಂದ ರೈತರು ದೂರ ಸರಿಯುತ್ತಿರುವ ಸಂದರ್ಭದಲ್ಲಿ ದರ್ಶನ್ ದಂಪತಿ ತಮ್ಮ ಮನೆಯ ಪಕ್ಕದ ಸುಮಾರು 3 ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಹವಾಮಾನಕ್ಕೆ ಹೊಂದಿಕೊಳ್ಳುವ ರಾಜಮುಡಿ, ದೊಡ್ಡಿ, ಸೋನಾ ಮಸೂರಿ, ಜೀರಿಗೆ ಸಣ್ಣ ಹಾಗೂ ಬಾಸುಮತಿ ಸೇರಿದಂತೆ ಬಿಳಿ ಮತ್ತು ಕೆಂಪು ಬಣ್ಣದ ವಿವಿಧ ತಳಿಗಳ ಅಕ್ಕಿಯನ್ನು ಬೆಳೆಯುತ್ತಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವ ಭತ್ತವನ್ನು ಉಳಿಸಿಕೊಂಡು, ಹೆಚ್ಚುವರಿ ಭತ್ತವನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಫಸಲು ರಕ್ಷಿಸುವುದು ಸವಾಲಾಗಿದೆ ಎನ್ನುತ್ತಾರೆ ದರ್ಶನ್.
ಉಪಕಸುಬಾದ ಮೀನು ಸಾಕಣೆ: ಇತ್ತೀಚೆಗೆ ಕೃಷಿ ಕೆರೆಯಲ್ಲಿ ಮೀನು ಸಾಕಣೆಯನ್ನೂ ಆರಂಭಿಸಿರುವ ದರ್ಶನ್, ಗ್ರಾಸ್ ಕಾರ್ಪ್, ಕಾಟ್ಲಾ, ರೋಹು, ಮೃಗಲ್ ಕಾಟ್ಲಾ ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಸಾಕುತ್ತಿದ್ದಾರೆ. ಹಂತ ಹಂತವಾಗಿ ಮೀನುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. ಕೃಷಿಯ ವಿವಿಧ ಚಟುವಟಿಕೆಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡು ಮುನ್ನಡೆಯುತ್ತಿರುವ ದರ್ಶನ್ ಹಾಗೂ ಗಣಶ್ರೀ ದಂಪತಿ, ಸಮಗ್ರ ಕೃಷಿ ಪದ್ಧತಿಯ ಮೂಲಕ ಕೃಷಿಯಲ್ಲೇ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ
ಯುವಕರು ಕೃಷಿಯನ್ನು ಕೇವಲ ಸಾಂಪ್ರದಾಯಿಕ ವೃತ್ತಿಯಾಗಿ ನೋಡದೆ, ಆಧುನಿಕ ಹಾಗೂ ಸಮಗ್ರ ಕೃಷಿ ಪದ್ಧತಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಒಂದೇ ಬೆಳೆಯನ್ನು ಅವಲಂಬಿಸುವ ಬದಲು ಹೈನುಗಾರಿಕೆ, ನರ್ಸರಿ, ತರಕಾರಿ, ಭತ್ತ ಹಾಗೂ ಮೀನು ಸಾಕಣೆಯಂತಹ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಬಹುದು. ಕೃಷಿಯಲ್ಲಿ ಶ್ರಮ, ತಾಳ್ಮೆ ಮತ್ತು ನಿರಂತರ ಆಸಕ್ತಿ ಬಹಳ ಮುಖ್ಯ. ಕಾಡಾನೆಗಳ ಹಾವಳಿ ಸೇರಿದಂತೆ ಹಲವು ಸವಾಲುಗಳಿದ್ದರೂ ಕೃಷಿಯ ಮೇಲಿನ ನಂಬಿಕೆಯಿಂದ ಮುನ್ನಡೆಯುತ್ತಿದ್ದೇನೆ.
ಸಿದೇಟ್ಟಿರ ದರ್ಶನ್ ಯುವ ಕೃಷಿಕ ನೆಲ್ಯಹುದಿಕೇರಿ ಗ್ರಾಮ