ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ನಡೆಸುತ್ತಿರುವ ಬಿಎಲ್‌ಒ ಸುಚಿತ್ರಾ. ಬಿಎಲ್‌ಎಗಳಾದ ಎಂ.ಡಿ. ಕೃಷ್ಣಪ್ಪ, ಕಿರಣ್ ಇದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬAಧಿಸಿದAತೆ ಜಿಲ್ಲೆಯಲ್ಲಿ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದ್ದು, ಗಣತಿ ನಮೂನೆಯ ಡಿಜಿಟಲೀಕರಣ ಕೆಲಸ ಶೇ.84ರಷ್ಟು ಪೂರ್ಣಗೊಂಡಿದೆ. ಈ ವಿಷಯದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಮುನ್ನಡೆ ಸಾಧಿಸಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸ್ವಲ್ಪ ಹಿನ್ನಡೆಯಲ್ಲಿದೆ. ವಿವಿಧ ಕಾರಣಗಳಿಂದ ಇಲ್ಲಿಯ ತನಕ ಸುಮಾರು 57 ಸಾವಿರ ಮತದಾರರು ಗಣತಿ ನಮೂನೆ ಸಲ್ಲಿಸದಿರುವುದು ಕಂಡುಬAದಿದೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಬಿಎಲ್‌ಒಗಳ ಮನೆ ಮನೆ ಭೇಟಿ ಮುಖಾಂತರ ಕೊಡಗಿನಲ್ಲೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜೂ. 30ರಿಂದ ಆರಂಭವಾಗಿದ್ದು ಸುಮಾರು ಒಂದು ತಿಂಗಳ ಅವಧಿಯಲ್ಲಿ ಗಣತಿ ನಮೂನೆ ವಿತರಣಾ ಕಾರ್ಯ ಶೇ. 100ರಷ್ಟು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 4,68,657 ಮತದಾರರಿದ್ದು ಇಷ್ಟೂ ಮತದಾರರಿಗೆ ಸಂಬAಧಿಸಿದ ಗಣತಿ ನಮೂನೆಗಳ ವಿತರಣಾ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಈ ಬೆನ್ನಲ್ಲೇ ಗಣತಿ ನಮೂನೆಗಳ ಡಿಜಿಟಿಲೀಕರಣ ಕಾರ್ಯವೂ ಭರದಿಂದ ನಡೆಯತ್ತಿದೆ.
ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯಕ್ಕೆ ಆ.8ರ ತನಕ ಕಾಲಾವಕಾಶ ಇರುವುದರಿಂದ ಬಿಎಲ್‌ಒಗಳು ಸಮರೋಪಾದಿಯಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ನಡೆಸುತ್ತಿದ್ದಾರೆ. ಜಿಲ್ಲೆಯ 4,68,657 ಮತದಾರ ಪೈಕಿ 3,95,710 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಕೆಲಸ ಮುಗಿದಿದ್ದು ಈ ಮೂಲಕ ಶೇ. 84.43ರಷ್ಟು ಸಾಧನೆ ಮಾಡಿದಂತಾಗಿದೆ. ಆದಷ್ಟು ಶೀಘ್ರ ಶೇ. 100ರ ಗುರಿ ಮುಟ್ಟುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ನಿರ್ದೇಶನ ನೀಡಿದ್ದು ಈ ನಿಟ್ಟಿನಲ್ಲಿ ಬಿಎಲ್‌ಒಗಳು ಕಾರ್ಯೋನ್ಮುಖರಾಗಿದ್ದಾರೆ.
ವಿವಿಧ ಕಾರಣಗಳಿಂದ 57,766 ಮತದಾರರ ಗಣತಿ ನಮೂನೆಗಳ ಅಲ್ಲಿಕೆ ಆಗಿಲ್ಲ. ಇದರಲ್ಲಿ ಮೃತಪಟ್ಟ ಮತದಾರರು 13,237, ಶಾಶ್ವತವಾಗಿ ಸ್ಥಳಾಂತರಗೊAಡ ಮತದಾರರು 31,144, ಎರಡೂ ಕಡೆ ಹೆಸರು ಹೊಂದಿರುವ ಮತದಾರರು 5,066, ಗೈರು ಮತದಾರರ ಸಂಖ್ಯೆ 8,230 ಹಾಗೂ ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದಿರುವ ಮತದಾರರ ಸಂಖ್ಯೆ 89 ಎಂದು ಗುರುತಿಸಲಾಗಿದೆ.
ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯದಲ್ಲಿ ಶೇ. 85.74ರಷ್ಟು ಸಾಧನೆ ಮಾಡುವ ಮೂಲಕ ಮಡಿಕೇರಿ ವಿಧಾನಸಭಾ ಕ್ಷೇತ್ರ ಮುಂದಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.08ರಷ್ಟು ಪ್ರಮಾಣದಲ್ಲಿ ಗಣತಿ ನಮೂನೆಗಳ ಡಿಜಿಟಲೀಕರಣ ನಡೆದಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ 2,38,447 ಮತದಾರರ ಪೈಕಿ 2,04,444 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಮುಗಿದಿದೆ. ಇದರಲ್ಲಿ 90 ಗಣತಿ ನಮೂನೆಗಳನ್ನು ಮತದಾರರೇ ಡಿಜಿಟಲೀಕರಣ ಮಾಡಿದ್ದು, ಬಿಎಲ್‌ಒಗಳು ಇದನ್ನು ಅನುಮೋದಿಸಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 2,30,210 ಮತದಾರರ ಪೈಕಿ 1,91,266 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ನಡೆದಿದೆ. ಇಲ್ಲಿ 53 ಗಣತಿ ನಮೂನೆಗಳ ಡಿಜಿಟಲೀಕರಣವನ್ನು ಮತದಾರರೇ ಮಾಡಿದ್ದು ಬಿಎಲ್‌ಒಗಳಿಂದ ಅನುಮೋದಿಸಲ್ಪಟ್ಟಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣತಿ ನಮೂನೆಗಳ ಡಿಜಿಟಲೀಕರಣದಲ್ಲಿ ಸೋಮವಾರಪೇಟೆ ತಾಲೂಕು ಮುಂದಿದೆ. ತಾಲೂಕಿನ 88,352 ಮತದಾರರ ಪೈಕಿ 78,767 ಮತದಾರರ ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿದ್ದು ಶೇ.89.15ರಷ್ಟು ಸಾಧನೆ ಆಗಿದೆ. ಕುಶಾಲನಗರ ತಾಲೂಕಿನ 93,920 ಮತದಾರರ ಪೈಕಿ 79,858 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು ಶೇ. 85.03ರಷ್ಟು ಗುರಿ ಸಾಧಿಸಲಾಗಿದೆ. ಮಡಿಕೇರಿ ತಾಲೂಕಿನ ಒಟ್ಟು 56,175 ಮತದಾರರ ಪೈಕಿ 45,819 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ಣವಾಗಿದ್ದು, ಶೇ.81.56ರಷ್ಟು ಪ್ರಗತಿ ಸಾಧಿಸಲಾಗಿದೆ.
ವಿರಾಜಪೇಟೆ ವಿಧಾಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಣತಿ ನಮೂನೆಗಳ ಡಿಜಿಟಲೀಕರಣದಲ್ಲಿ ಮಡಿಕೇರಿ ತಾಲೂಕು ಮುಂದಿದೆ. ತಾಲೂಕಿನ ಒಟ್ಟು 66,646 ಮತದಾರರ ಪೈಕಿ 59,860 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಮುಗಿದಿದ್ದು ಶೇ. 89.82ರಷ್ಟು ಪ್ರಗತಿ ಸಾಧಿಸಲಾಗಿದೆ. ವಿರಾಜಪೇಟೆ ತಾಲೂಕಿನ 79,942 ಮತದಾರರ ಪೈಕಿ 67,388 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಪೂರ್ಣವಾಗಿದ್ದು, ಶೇ. 84.30ರಷ್ಟು ಗುರಿ ಸಾಧಿಸಿಲಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 83,622 ಮತದಾರರಿದ್ದು 64,018 ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಮುಗಿದಿದ್ದು ಶೇ.76.56ರಷ್ಟು ಸಾಧನೆ ಆಗಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಡಿಜಿಟಲೀಕರಣ ಮಾಡುವುದರ ಜತೆಗೆ ಗುಣಮಟ್ಟ ಪರೀಕ್ಷೆ ಸಂಬAಧ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮತದಾರರ ಶಾಶ್ವತ ಸ್ಥಳಾಂತರ, ಮರಣ ಹೊಂದಿದ್ದಲ್ಲಿ, ಎರಡು ಕಡೆ ಹೆಸರು ಹೊಂದಿರುವ, ಇತರೆ ಕಾರಣಗಳಿಂದ ಗಣತಿ ನಮೂನೆ ಸಲ್ಲಿಸದಿರುವ ಮತದಾರರ ಬಗ್ಗೆಯೂ ಸಹ ವಿಶೇಷ ಗಮನಹರಿಸಲು ಸೂಚಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬAಧ ಮತಗಟ್ಟೆ ಅಧಿಕಾರಿ ಮನೆ ಮನೆಗೆ ಭೇಟಿ ನೀಡುವ ಕಾರ್ಯ ಮತ್ತು ಗಣತಿ ನಮೂನೆಗಳ ಡಿಜಿಟಲೀಕರಣ ಕೆಲಸ ಆ. 8ರ ವರೆಗೆ ನಡೆಯಲಿದೆ. ಮತಗಟ್ಟೆ ಪುನರ್ ವಿಂಗಡಣೆ ಕಾರ್ಯಕ್ರ ಆ. 8 ರಂದು ನಡೆಯಲಿದೆ. ಕರಡು ಮತದಾರರ ಪಟ್ಟಿ ಆ. 17ರಂದು ಪ್ರಕಟವಾಗಲಿದೆ. ಮತದಾರರ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಆ.17ರಿಂದ ಸೆ. 16ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸೂಚನೆ ಹಂತ, ಹಕ್ಕು ಮತ್ತು ಆಕ್ಷೇಪಣೆಗಳ ತೀರುವಳಿ ಆ. 17 ರಿಂದ ಅ. 15 ರವರೆಗೆ ನಡೆಯಲಿದೆ. ಅಂತಿಮ ಮತದಾರರ ಪಟ್ಟಿ ಅ. 19 ರಂದು ಪ್ರಕಟ ಆಗಲಿದೆ.
"
ಎಸ್‌ಐಆರ್ ಸಂಬAಧ ಗಣತಿ ನಮೂನೆ ವಿತರಣಾ ಕಾರ್ಯ ಶೇ. 100ರಷ್ಟು ಪೂರ್ಣಗೊಂಡಿದೆ. ಆದರೂ ಯಾರಾದರೂ ಬಿಟ್ಟು ಹೋಗಿದ್ದಲ್ಲಿ ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿದ ನಮೂನೆ ಪಡೆದು, ಡಿಜಿಟಲೀಕರಣಗೊಳಿಸಬೇಕು. ಪ್ರತೀ ನೋಡಲ್ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಗಣತಿ ನಮೂನೆ ವಿತರಿಸಿ ಭರ್ತಿ ಮಾಡಿದ ನಮೂನೆಯನ್ನು ಪಡೆದು ಡಿಜಿಟಲೀಕರಣದ ಪ್ರಗತಿ ಸಾಧಿಸಬೇಕು. ಅರ್ಹ ಮತದಾರರು ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ತಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
— ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ