ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ರಕ್ತದಾನ ಶಿಬಿರವನ್ನು ಗೋಣಿಕೊಪ್ಪಲು ಕಾವೇರಿ ಎಜುಕೇಷನ್ ಸೊಸೈಟಿ ಪ್ರಾಂಶುಪಾಲ ಡಾ.ಎಂ.ಬಿ ಕಾವೇರಿಯಪ್ಪ ಉದ್ಘಾಟಿಸಿದರು. ಪೊನ್ನಂಪೇಟೆ ರೆಡ್ ಕ್ರಾಸ್ ವಿಂಗ್ ಉಪಸಭಾಪತಿ ಪಿ.ಎಂ ಧಿಲನ್, ಖಜಾಂಚಿ ಪಿ.ಜಿ ರಾಜಶೇಖರ್, ಡಾ.ಕೆ.ಪಿ ಕರುಂಬಯ್ಯ, ಡಾ.ಯತಿರಾಜ್, ಡಾ.ಶರತ್, ಚಂದನ್ ಕಾಮತ್ ಮತ್ತಿತರರಿದ್ದರು. 
ಕೊಡಗು

ರಕ್ತದಾನದಿಂದ ಹೃದಯ ಸಂಬಂಧಿ ಕಾಯಿಲೆ ತಡೆ

ಪೊನ್ನಂಪೇಟೆ: ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಕೆ.ಪಿ. ಕರುಂಬಯ್ಯ ತಿಳಿಸಿದರು.
ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಯೂತ್ ರೆಡ್ ಕ್ರಾಸ್, ಎನ್‌ಸಿಸಿ, ರೋವರ್ಸ್ ರೆಂಜರ್ಸ್, ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ದೇಹದಲ್ಲಿ 5ರಿಂದ 6 ಲೀಟರ್ ರಕ್ತವಿರುತ್ತದೆ. ಸಾರ್ವಜನಿಕರಿಗೆ ರಕ್ತದಾನದ ಬಗೆ ಸರಿಯಾದ ಮಾಹಿತಿ ಇಲ್ಲದೆ ಕಾರಣ ಕೆಲವರು ಭಯದಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. 350 ಎಂ.ಎಲ್. ರಕ್ತವನ್ನು ದಾನ ಮಾಡಿದರೆ ಕೇವಲ 24 ಗಂಟೆಯಲ್ಲಿ ಆ ರಕ್ತವು ಮರಳಿ ಶರೀರಕ್ಕೆ ಸೇರುತ್ತದೆ.
ನಮ್ಮ ಜಿಲ್ಲೆಗೆ ಒಂದು ತಿಂಗಳಿಗೆ 500ರಿಂದ 600 ಯೂನಿಟ್ ರಕ್ತ ಅವಶ್ಯಕತೆ ಇದ್ದು, 1 ರಿಂದ 65 ವಯೋಮಿತಿಯ ಒಳಗಿರುವವರು ರಕ್ತದಾನ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿದರು.
ಗೋಣಿಕೊಪ್ಪಲು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಹಾಗೂ ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಬಿ.ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ರಾಷ್ಟ್ರೀಯ ಅಧ್ಯಕ್ಷ ಎಂ.ಆರ್.ಜಯೇಶ ಉದ್ಘಾಟಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಮಾತನಾಡಿ, ಏಡ್ಸ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಡಿ.1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಸುಮಾರು 25 ಮಿಲಿಯನ್ ಜನರು ಏಡ್ಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಏಡ್ಸ್ ರೋಗಿಗಳು ಇದ್ದು, ವೀರಾಜಪೇಟೆ ತಾಲೂಕಿನಲ್ಲಿ ಪ್ರತಿ ತಿಂಗಳು 6 ರಿಂದ 7 ಪ್ರಕರಣಗಳು ಪತ್ತೆಯಾಗುತ್ತಿವೆ ಎಂದರು.
ಎಚ್‌ಐವಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಮತ್ತು ಬಳಸಿದ ಸಿರಿಂಜ್ ಮತ್ತು ಸೂಜಿಗಳಿಂದ ಹರಡುತ್ತದೆ. ಎಚ್‌ಐವಿ ಪೀಡಿತರಾದವರಿಗೆ ಹತ್ತು ವರ್ಷಗಳ ಕಾಲ ಯಾವುದೇ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಈ ರೋಗವನ್ನು ರಕ್ತ ಪರೀಕ್ಷೆಯಿಂದ ಮಾತ್ರ ಕಂಡುಹಿಡಿಯಲು ಸಾಧ್ಯ ಎಂದರು.
ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ.ಕಾವೇರಿಯಪ್ಪ, ಪೊನ್ನಂಪೇಟೆ ರೆಡ್ ಕ್ರಾಸ್ ವಿಂಗ್ ಉಪ ಸಭಾಪತಿ ಪಿ.ಎಂ.ದಿಲನ್ ಚಂಗಪ್ಪ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಾರ್ಯದರ್ಶಿ ನಾಗೇಶ್ ಮೋಹನ್, ಖಜಾಂಚಿ ಮೋಹನ್ ಮೇಕೇರಿರ, ಪೊನ್ನಂಪೇಟೆ ವಿಂಗ್ ರೆಡ್ ಕ್ರಾಸ್ ಕಾರ್ಯದರ್ಶಿ ಚಂದನ್ ಕಾಮತ್, ಖಜಾಂಚಿ ಪಿ.ಜಿ.ರಾಜಶೇಖರ್, ಪ್ರಾಜೆಕ್ಟ್ ಡೈರೆಕ್ಟರ್ಸ್ ಡಾ.ಶರತ್, ಸಿ.ಜೆ.ಅಂತೋಣಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ.ಎ.ಕುಶಾಲಪ್ಪ, ಕೆ.ಎಸ್.ಪೂಜಾ, ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಅಕ್ರಂ, ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ರೋವರ್ಸ್ ರೆಂಜರ್ಸ್ ಅಧಿಕಾರಿ ಡಾ.ಸೀಮಾ, ಯು.ಟಿ. ಪೆಮ್ಮಯ್ಯ ಇದ್ದರು.