ನಾಪೋಕ್ಲು: ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ನಾಪೋಕ್ಲು ಶಾಖೆ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕ್ರೀಡಾಕೂಟವನ್ನು ನ.25ರಿಂದ 29ರವರೆಗೆ ಆಯೋಜಿಸಲಾಗಿದೆ ಎಂದು ಆಚರಣೆ ಸಮಿತಿ ಅಧ್ಯಕ್ಷ ಟಿ.ಸಿ.ರಾಜೀವ್ ಹೇಳಿದರು.
ನ.29ರಂದು ಶ್ರೀ ನಾರಾಯಣ ಗುರು ಜಯಂತಿ ಆಯೋಜಿಸಲಾಗಿದ್ದು, ಇದರ ಅಂಗವಾಗಿ ನ.25ರಿಂದ 29ರವರೆಗೆ ಸರ್ವಧರ್ಮೀಯರಿಗೆ ಕ್ರಿಕೆಟ್, ಹಗ್ಗ ಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ನ.29ರಂದು ಇಲ್ಲಿಯ ಮಾರುಕಟ್ಟೆ ಆವರಣದಿಂದ ಗುರುವಿನ ಅಲಂಕೃತ ಮಂಟಪ ಮೆರವಣಿಗೆ ಉದ್ಘಾಟನೆ ನಡೆಯಲಿದೆ. ಎಸ್ಎನ್ಡಿಪಿ ಶಾಖೆಯ ಉಪಾಧ್ಯಕ್ಷ ಸುರೇಶ್, ಮಹಿಳಾ ಘಟಕದ ಅಧ್ಯಕ್ಷ ವಿನೀತಾ ಸುರೇಶ್, ಮಹಿಳಾ ಘಟಕದ ಕಾರ್ಯದರ್ಶಿ ಆಶಾ, ನಿರ್ದೇಶಕಿ ಸುಲೋಚನಾ ಅನಿಲ್ ಮೆರವಣಿಗೆ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜೆಎಪಿ ಶಾಲಾ ಮೈದಾನದಲ್ಲಿ ಎಸ್ಎನ್ಡಿಪಿ ಶಾಖೆಯ ಅಧ್ಯಕ್ಷ ಟಿ.ಸಿ.ಲವ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟಿಸುವರು. ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡುವರು. ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವಿಧಾನಸಭಾ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಕೊಡಗು ಜಿಲ್ಲಾ ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ.ಲೋಕೇಶ್, ಕಾರ್ಯದರ್ಶಿ ಪ್ರೇಮಾನಂದ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚೆರಿಯಪಂಡ ಸುರೇಶ್ ನಂಜಪ್ಪ, ವೈದ್ಯರಾದ ದೇವದಾಸ್, ಚಂಗಪ್ಪ, ಸೇಂಟ್ ಮೇರಿಸ್ ಚರ್ಚ್ ಧರ್ಮಗುರು ರಘು ವಿಕ್ಟರ್, ಟೌನ್ ಜುಮಾ ಮಸೀದಿ ಧರ್ಮ ಗುರು ಶೌಕತ್ ಆಲಿ ಸಖಾಫಿ, ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ, ಕಾಫಿ ಬೆಳೆಗಾರ ಅರೆಯಡ ರತ್ನಾ ಪೆಮ್ಮಯ್ಯ, ಗ್ರಾಪಂ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಎಸ್ಎನ್ಡಿಪಿ ಶಾಖೆಯ ಅಧ್ಯಕ್ಷ ಟಿ.ಸಿ.ಲವ ಮಾತನಾಡಿ, ಕ್ರಿಕೆಟ್ ಪ್ರಥಮ ಬಹುಮಾನ 20,000 ರೂ., ದ್ವಿತೀಯ 10 ಸಾವಿರ ರೂ., ಪುರುಷರ ಹಗ್ಗಜಗ್ಗಾಟ ಪ್ರಥಮ 22,222 ರೂ., ದ್ವಿತೀಯ 11,111 ರೂ, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ., ಪುರುಷರ ವಾಲಿಬಾಲ್ ಪ್ರಥಮ 15,000 ರೂ., ದ್ವಿತೀಯ ಬಹುಮಾನ 10 ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಎನ್ಡಿಪಿ ಶಾಖೆಯ ಕಾರ್ಯದರ್ಶಿ ಶ್ರೀಧರ್, ಉಪಾಧ್ಯಕ್ಷ ತಂಗಾ, ಚಿನ್ನ ರಧೀಶ್, ಪದಾಧಿಕಾರಿಗಳು ಇದ್ದರು.