ಕುಶಾಲನಗರದ ಬಲಮರಿ ಗಣಪತಿ ದೇವಾಲಯದ 28ನೇ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕುಶಾಲನಗರ: ಪಟ್ಟಣದ ಗೊಂದಿಬಸವನಹಳ್ಳಿ ರಸ್ತೆಯಲ್ಲಿರುವ ಬಲಮರಿ ಗಣಪತಿ ದೇವಾಲಯದ 28ನೇ ವಾರ್ಷಿಕೋತ್ಸವ ಹಾಗೂ ಪೂಜಾ ಕಾರ್ಯಕ್ರಮ ಬುಧವಾರ ಮತ್ತು ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬುಧವಾರ ಕಳಸ ಸ್ಥಾಪನೆ, ಶುದ್ಧಿ ಪುಣ್ಯಾಹ, ಗಣಪತಿ ಹೋಮ, ನವಗ್ರಹ ಪೂಜೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳು ಜರುಗಿದವು. ಗುರುವಾರ ಬೆಳಗ್ಗೆ ಗಣಪತಿ ಹೋಮ, ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಗಣಪತಿ ದೇವರನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಬಳಿಕ ನೆರೆದ ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅರ್ಚಕ ಪ್ರಕಾಶ್ ಭಟ್ ನೇತೃತ್ವದ ತಂಡದಿಂದ ಪೂಜಾ ವಿಧಿಗಳು ನಡೆದವು.
ದೇವಾಲಯ ಸಮಿತಿ ಗೌರವಾಧ್ಯಕ್ಷ ಎಂ.ಕೆ.ದಿನೇಶ್, ನಿಕಟಪೂರ್ವ ಅಧ್ಯಕ್ಷ ರೇಣುಕುಮಾರ್, ಪ್ರಭಾರ ಅಧ್ಯಕ್ಷ ಕೆ.ವಿ.ಅರುಣ್, ಉಪಾಧ್ಯಕ್ಷ ಶಿವರಾಂ, ಖಜಾಂಚಿ ಬಿ.ಸಿ.ಆನಂದ್, ನಿರ್ದೇಶಕರಾದ ಗೋವಿಂದರಾಜ್, ರಾಮಕೃಷ್ಣಾಚಾರ್, ಪೂವಯ್ಯ, ಮುತ್ತಣ್ಣ, ಲಿಂಗಂ, ಜಿ.ಬಿ.ಜಗದೀಶ್, ಲವಕುಮಾರ್, ಭೀಮಯ್ಯ,ಎಸ್.ನಾಗರಾಜು, ಹನುಮರಾಜ್ ಮತ್ತಿತರರು ಪಾಲ್ಗೊಂಡಿದ್ದರು.