ಕೈಕೇರಿಯ ಸವಿತಾ ಸಮಾಜ ಕಟ್ಟಡದಲ್ಲಿ ಇತ್ತೀಚೆಗೆ ನಡೆದ ೧೯ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಸಿ.ಮಹೇಶ್ ನಾಚಯ್ಯ ಅವರು ಉದ್ಘಾಟಿಸಿದರು. ನಾಯಂದಿರ ಆರ್.ಶಿವಾಜಿ, ಮುಡುವಂಡ ಎಸ್.ರಮೇಶ ಇತರರಿದ್ದರು.
- ಸಂಸ್ಕೃತಿ-ಸಂಸ್ಕಾರದಿಂದ ಮನುಷ್ಯತ್ವ ರೂಢಿಸಿಕೊಳ್ಳಲು ಸಾಧ್ಯ
ಮಡಿಕೇರಿ: ಸಂಸ್ಕೃತಿಯ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡರೆ ಜಾತಿ ವ್ಯವಸ್ಥೆ ನಿರ್ಮೂಲನೆ ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹೇಳಿದರು.
ಕೈಕೇರಿಯ ಸವಿತಾ ಸಮಾಜ ಕಟ್ಟಡದಲ್ಲಿ ನಡೆದ ೧೯ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾತಿ ವ್ಯವಸ್ಥೆಯಿಂದ ದೂರ ಸರಿಯಬೇಕಾದಲ್ಲಿ ವಿದ್ಯೆ, ಬುದ್ಧಿಯ ಜೊತೆಗೆ ಒಳ್ಳೆಯ ನಡೆ-ನುಡಿ, ಸಂಸ್ಕೃತಿಯನ್ನು ಬೆಳೆಸಿಕೊಂಡು ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸ ಇರಬೇಕು. ಕರ್ನಾಟಕ ಕೊಡವ ಅಕಾಡೆಮಿಯ ನೂತನ ಯೋಜನೆಯಾದ ಕೊಡವ ಪುಸ್ತಕ ಪತ್ತಾಯದ ಮೂಲಕ ನಾಡಿನೆಲ್ಲೆಡೆ ಸಂಘ-ಸಂಸ್ಥೆ, ಸಮಾಜ, ದೇವನೆಲೆ ಐನ್‌ಮನೆಗಳಲ್ಲಿ ಅನಾವರಣಗೊಳಿಸುತ್ತಿದ್ದೇವೆ. ಇದರ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಘ, ಸಂಸ್ಥೆ, ಸಮಾಜ, ಐನ್‌ಮನೆಗಳಿಗೆ ಅಕಾಡೆಮಿ ವತಿಯಿಂದ ದುಡಿ, ತಾಳ, ಪರಿಕರಗಳನ್ನು ಕೊಡವ ಸಂಸ್ಕೃತಿಯ ಉನ್ನತಿಗೆ ಉಪಯೋಗವಾಗುವಂತೆ ಬಳಕೆ ಮಾಡಿಕೊಳ್ಳಬೇಕು. ಆಯಾಯ ಸ್ಥಳಗಳಲ್ಲಿ ಬಾಳೋಪಾಟ್, ಉಮ್ಮತ್ತಾಟ್, ಕೋಲಾಟ್ ಅರಿತಿರುವವರು ಆಟ್-ಪಾಟ್ ಕಲಿಸಿಕೊಡಲು ಬಯಸಿದ್ದಲ್ಲಿ ಅಕಾಡೆಮಿಯಿಂದ ನೆರವು ನೀಡಲಾಗುವುದು ಎಂದರು.
ಸವಿತಾ ಸಮಾಜದ ಅಧ್ಯಕ್ಷ ನಾಯಂದಿರ ಆರ್.ಶಿವಾಜಿ ಮಾತನಾಡಿ, ಕಲಿಯಲು ಬೇಕಾದಷ್ಟಿದೆ. ಕಲಿತದ್ದು ಎಂದಿಗೂ ಶಾಶ್ವತವಾಗಿರುತ್ತದೆ. ಅಕಾಡೆಮಿಯ ವತಿಯಿಂದ ಸವಿತಾ ಸಮಾಜದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪಿಸಿರುವುದು ಹೆಮ್ಮೆಯ ವಿಚಾರ. ಸಮಾಜ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಅಂತೆಯೇ, ಅಕಾಡೆಮಿ ವತಿಯಿಂದ ಸವಿತಾ ಸಮಾಜಕ್ಕೆ ಒಡಿಕತ್ತಿ, ದುಡಿತಾಳ ನೀಡಿರುವುದು ಸಮಾಜದಲ್ಲಿ ಕೊಡವ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಲು ಕಾರಣೀಭೂತವಾಗಿದೆ ಎಂದರು.
ಸವಿತಾ ಸಮಾಜ ವತಿಯಿಂದ ಅಕಾಡೆಮಿ ಅಧ್ಯಕ್ಷರಿಗೆ ರೂ.ಹತ್ತು ಸಾವಿರದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ವೇದಪಂಡ, ಚೋಂದುವಂಡ ಹಾಗೂ ಮುಡುವಂಡ ಕುಟುಂಬಸ್ಥರಿಗೆ ದುಡಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಮುಡುವಂಡ ಎಸ್.ರಮೇಶ, ನಿರ್ದೇಶಕ ಹಾಗೂ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ತಾಪನೆರ ಎಂ.ಸುರೇಶ್, ಅಕಾಡೆಮಿಯ ಸದಸ್ಯರಾದ ಚೆಪ್ಪುಡಿರ ಉತ್ತಪ್ಪ, ಕಂಬೆಯಂಡ ಡೀನಾ ಬೋಜಣ್ಣ, ಪೊನ್ನಿರ ಗಗನ್, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ ಉಪಸ್ಥಿತರಿದ್ದರು.