ಭಗವತಿ ದೇವರ ವಾರ್ಷಿಕೋತ್ಸವ ಪ್ರಯುಕ್ತ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಶ್ರೀ ಭಗವತಿ ದೇವಾಲಯದ 15ನೇ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಉತ್ಸವದ ಪ್ರಯಕ್ತ ಬೆಳಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮೊದಲಿಗೆ ಶ್ರೀ ಗಣಪತಿ ಹೋಮ, ತದನಂತರ ಭಗವತಿ ಹೋಮ, ಕಲಶಾಭಿಷೇಕ ಹಾಗೂ ಇತರ ಅರ್ಚನೆ ಸೇವೆಗಳು ಜರುಗಿದವು.
ಭಕ್ತರು ವಿಶೇಷ ಸೇವೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನಂತರ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಿತು. ಸಂಜೆ ಬೆಲಿಕಲ್ಲು ಪೂಜೆ ಹಾಗೂ ದೇವರ ನೃತ್ಯ ಬಲಿ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ಕೈಂಕರ್ಯಗಳನ್ನು ಬೈತೂರಿನ ತಂತ್ರಿಗಳಾದ ರಾಜನ್ ನಂಬೂದರಿಪಾಡ್ ಮತ್ತು ದೇವಸ್ಥಾನದ ಅರ್ಚಕ ರಾಧಾಕೃಷ್ಣ ಕನ್ನೇರಿ ನೆರವೇರಿಸಿದರು. ವಾರ್ಷಿಕೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಇದ್ದರು.