ಕುಶಾಲನಗರ
ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊAಡಿರುವ ಐತಿಹಾಸಿಕ ಕೂಡಿಗೆ ಡೇರಿಯನ್ನು ಹಾಸನ ಹಾಲು ಒಕ್ಕೂಟದ ವತಿಯಿಂದ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ನೂತನ ಕಟ್ಟಡ ನಿರ್ಮಾಣದ ನಂತರ ಇಲ್ಲೇ ಹಾಲು ಹಾಗೂ ವಿವಿಧ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಅಗತ್ಯವಿರುವ ಎಲ್ಲಾ ಹಂತದ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿವೆ ಎಂದು ಒಕ್ಕೂಟದ ಪ್ರಧಾನ ವ್ಯವಸ್ಥಾಪಕಿ ಮಾನಸ ಪಾಟೀಲ್ ತಿಳಿಸಿದ್ದಾರೆ.
ಕೂಡಿಗೆ ಡೇರಿ ಆವರಣದಲ್ಲಿ ಅಧಿಕಾರಿ ವೃಂದ ಹಾಗೂ ಕಾರ್ಮಿಕ ವರ್ಗದ ವತಿಯಿಂದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣಪತಿ ವಿಗ್ರಹದ ವಿಸರ್ಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಮಾತನಾಡಿದರು.
ಕರ್ನಾಟಕ ರಾಜ್ಯ ಹಾಲು ಮಹಾಮಂಡಲದ ವತಿಯಿಂದ 14 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ಮತ್ತು ಮೂಲಸೌಕರ್ಯ ಕಾಮಗಾರಿಗಳು ನಡೆಯಲಿವೆ. ಒಕ್ಕೂಟದ ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ನೀಡಿದ ನಿರ್ದೇಶನದಂತೆ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಂಡಿದೆ.
ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ನೂತನ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳ ಅಳವಡಿಕೆ, ಹೆಚ್ಚಿನ ಸಾಮರ್ಥ್ಯದ ಬಾಯ್ಲರ್‌ಗಳ ಸ್ಥಾಪನೆ ಸೇರಿದಂತೆ ಡೇರಿಯ ಆಧುನೀಕರಣಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಕ್ರಿಯೆಗಳು ಚಾಲನೆಯಲ್ಲಿವೆ.
ಕೊಡಗು ಜಿಲ್ಲೆಯಲ್ಲಿ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಪೂರೈಸುವಲ್ಲಿ ಕೂಡಿಗೆ ಡೇರಿ ಸಿಬ್ಬಂದಿ ಅತ್ಯುತ್ತಮವಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡೇರಿಯನ್ನು ಎಲ್ಲಾ ಹಂತದಲ್ಲೂ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಒಕ್ಕೂಟದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನ ವ್ಯವಸ್ಥಾಪಕರು ಡೇರಿಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ನೂತನ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳವನ್ನು ವೀಕ್ಷಿಸಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪ್ರಧಾನ ವ್ಯವಸ್ಥಾಪಕಿ ಮಾನಸ ಪಾಟೀಲ್ ಹಾಗೂ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೂಡಿಗೆ ಡೇರಿ ವ್ಯವಸ್ಥಾಪಕ ನಂದೀಶ್, ಉಪ ವ್ಯವಸ್ಥಾಪಕ ಅನಿಲ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.