ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ನಡೆದ ತಾಲೂಕಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಕೆ.ಜಿ.ಬೋಪಯ್ಯ ಅವರು ಚಾಲನೆ ನೀಡಿದರು. ಎಂ.ಪಿ.ಕೇಶವ ಕಾಮತ್, ಟಿ.ಪಿ.ರಮೇಶ್ ಇತರರಿದ್ದರು. 
ಕೊಡಗು

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ
  • ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ.ಜಿ.ಬೋಪಯ್ಯ
ಮಡಿಕೇರಿ: ಕನ್ನಡ ಭಾಷೆ, ನಾಡು-ನುಡಿ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನ ಮತ್ತು ಸ್ವಾಭಿಮಾನ ಇರಬೇಕು ಎಂದು ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ನಡೆದ ತಾಲೂಕಿನ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ. ಆದರೆ ವಾಸ್ತವ ಪರಿಸ್ಥಿತಿ ಹೇಗಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಹ ಸ್ಥಳೀಯ ಹಾಗೂ ನಾಡಿನ ಭಾಷೆಗಳು ಬಲಯುತವಾಗಿದೆ. ಆದರೆ ನಗರ, ಮಹಾನಗರ ಪ್ರದೇಶಗಳಲ್ಲಿ ಪರಿಸ್ಥಿತಿ ಯಾವ ರೀತಿ ಇದೆ ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದು ಕೆ.ಜಿ.ಬೋಪಯ್ಯ ಒತ್ತಿ ಹೇಳಿದರು.
ಕನ್ನಡ ಭಾಷೆ ಬಗ್ಗೆ ತಾತ್ಸಾರ ಇರಬಾರದು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಚಿಂತಿಸಬೇಕಿದೆ ಎಂದ ಅವರು, ಎಲ್ಲರಲ್ಲೂ ಸ್ವಾಭಿಮಾನ ಬಿತ್ತಬೇಕು. ಕನ್ನಡ, ಕೊಡವ, ಅರೆಭಾಷೆ ಜನರ ಅರೆಭಾಷೆ ಉಳಿಯಬೇಕು. ರಾಜ್ಯದಲ್ಲಿ ಇತರೆ ಭಾಷೆಗಳನ್ನು ಸಮಾನವಾಗಿ ಕಾಣುತ್ತೇವೆ. ಆದರೆ ಹತ್ತಿರದ ರಾಜ್ಯಗಳಿಗೆ ತೆರಳಿದಾಗ ಪರಿಸ್ಥಿತಿ ಬೇರೆ ಇದೆ ಎಂಬುದನ್ನು ಮನಗಾಣಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕನ್ನಡ ಭಾಷೆ, ನಾಡು-ನುಡಿ, ವಿಚಾರಧಾರೆಗಳು ಎಲ್ಲೆಡೆ ತಲುಪಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಸಹಕಾರಿ ಆಗಿದೆ. ಪುಸ್ತಕ ಬಿಡುಗಡೆ, ಸ್ಮರಣ ಸಂಚಿಕೆ ಹೊರತರುವುದು, ಕವಿಗೋಷ್ಠಿ, ವಿಚಾರಗೋಷ್ಠಿ, ಕೃಷಿ, ಸಾಹಿತ್ಯ ಹೀಗೆ ಪ್ರತಿಯೊಂದು ಬಗ್ಗೆಯೂ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕನ್ನಡ ಜೊತೆಗೆ ಕೊಡವ, ಅರೆಭಾಷೆ ಸೇರಿದಂತೆ ಹಲವು ಭಾಷೆಗಳ ಬೆಳವಣಿಗೆಗೆ ಇಲ್ಲಿನ ಸ್ಥಳೀಯರು ಶ್ರಮಿಸಿದ್ದಾರೆ. ಅವರನ್ನು ಸದಾ ಸ್ಮರಿಸಬೇಕಿದ್ದು, ಆ ನಿಟ್ಟಿನಲ್ಲಿ ಯುವಜನರಿಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ನಡಿಕೇರಿಯಂಡ ಚಿಣ್ಣಪ್ಪ, ಸೇರಿದಂತೆ ಹಲವರು ಕನ್ನಡ ಮತ್ತು ಕೊಡವ ಭಾಷೆ ಬೆಳವಣಿಗೆಗೆ ಶ್ರಮಿಸಿದ್ದು, ಸ್ಥಳೀಯ ಭಾಷೆ ಜೊತೆಗೆ ನಾಡುನುಡಿ ಭಾಷೆ ಬೆಳೆಸಬೇಕು ಎಂದರು.
ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ನಾಡಿನಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನವಿದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಕನ್ನಡ ಭಾಷೆಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದರು.
ತಾ.ಪಂ.ಇಒ ಶೇಖರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ತನವನ್ನು ಉಳಿಸಿಕೊಂಡು ಬೆಳೆಯಬೇಕು. ಮನೆಯಿಂದಲೇ ಕನ್ನಡ ಭಾಷೆ ಉಳಿಯಬೇಕು ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಕಳುಹಿಸಿದ್ದ ಸಂದೇಶವನ್ನು ಬಾಳೆಯಡ ದಿವ್ಯ ಮಂದಪ್ಪ ಅವರು ಓದಿದರು.
ತಾಲ್ಲೂಕು ೧೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ಲು ನವೀನ್, ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ರೇವತಿ ರಮೇಶ್, ಕೋಶಾಧಿಕಾರಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ವಾಸು ರೈ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ಡಿ.ವಿಜೇತ್, ರಾಜೇಶ್ ಪದ್ಮನಾಭ, ಹೋಬಳಿ ಘಟಕದ ಅಧ್ಯಕ್ಷರಾದ ನೆರವಂಡ ಉಮೇಶ್, ಈರಮಂಡ ಹರಿಣಿ ವಿಜಯ್, ಎ.ಲೋಕೇಶ್ ಕುಮಾರ್ ಇತರರು ಇದ್ದರು.
ಕೋಡಿರ ವಿನೋದ್ ನಾಣಯ್ಯ ಸ್ವಾಗತಿಸಿದರೆ, ಲಹರಿ ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಬಾಳೆಯಡ ದಿವ್ಯ ಮಂದಪ್ಪ ಮತ್ತು ಬಿದ್ದಂಡ ನಾಣಿ ದೇವಯ್ಯ ನಿರೂಪಿಸಿ, ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ವಂದಿಸಿದರು.
ಗಮನ ಸೆಳೆದ ಮೆರವಣಿಗೆ
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಂಗಳವಾದ್ಯ, ಚೆಂಡೆವಾದ್ಯ, ಕಳಸ ಹೊತ್ತ ಮಹಿಳೆಯರು, ಸ್ಥಬ್ಧಚಿತ್ರಗಳು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೊಡಗಿನ ವಾಲಗ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕರ ಸಂಘದವರು, ಎನ್‌ಸಿಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ಮೆರವಣಿಗೆಯಲ್ಲಿ ಗಮನ ಸೆಳೆದರು. ರಸ್ತೆ ಯುದ್ದಕ್ಕೂ ೧೧ ದ್ವಾರಗಳು ಗಮನ ಸೆಳೆದವು.