ಸೋಮವಾರಪೇಟೆ ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನಡೆದ ಸಮಾರಂಭವನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಮುತ್ತಣ್ಣ, ಬೆಳ್ಳಿಗೌಡ, ತಮ್ಮಣಿ, ಭರತ್, ಜಗದೀಶ್ ಇತರರು ಇದ್ದರು 2ಎಸ್‌ಪಿಟಿ1- ಸೋಮವಾರಪೇಟೆ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನ ಕೊಠಡಿಗಳನ್ನು ಉದ್ಯಮಿ ಬೆಳ್ಳಿಗೌಡ ಉದ್ಘಾಟಿಸಿದರು. ಶಾಸಕ ಡಾ.ಮಂತರ್‌ಗೌಡ, ಮುತ್ತಣ್ಣ, ತಮ್ಮಣಿ, ಭರತ್, ಜಗದೀಶ್ ಇದ್ದರು. 
ಕೊಡಗು

ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಲಿ

ವಸಂತಕುಮಾರ್ ಬಿ
ಸೋಮವಾರಪೇಟೆ: ಶೈಕ್ಷಣಿಕ ಕ್ಷೇತ್ರದ ಪ್ರಗತಿಯೊಂದಿಗೆ ಜನಾಂಗದ ಪ್ರಗತಿಯನ್ನು ನಾವು ನಿರೀಕ್ಷೆ ಮಾಡಬೇಕಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯೆ ಅತೀ ದೊಡ್ಡ ಸಂಪತ್ತು. ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯಲೇಬೇಕು. ವಿದ್ಯಾದಾನ ಮಾಹಾನ್ ಕಾರ್ಯವಾಗಿದೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯದ ರೈತ ಕುಟುಂಬಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಪ್ರತಿ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೇಬೇಕು. ಈ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘದವರು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಹೆಸರಿನಲ್ಲಿ ಆಂಗ್ಲ ಮಾಧ್ಯಮದಲ್ಲಿ ಶಾಲಾ, ಕಾಲೇಜು ತೆರೆದು ವಿದ್ಯಾದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ಓದಲೇಬೇಕು. ವಿದ್ಯೆಯೇ ನಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ. ಕಲಿತ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ರ‌್ಯಾಂಕ್‌ಗಳನ್ನು ಗ್ರಾಮೀಣ ಮಕ್ಕಳು ಪಡೆಯುತ್ತಿದ್ದಾರೆ ಎಂಬುದೇ ನಮಗೆ ಹೆಮ್ಮೆ ಎನಿಸುತ್ತದೆ. ಮಕ್ಕಳ ಕಲಿಕೆಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡುವುದು ಅವರ ಜವಾಬ್ದಾರಿಯಾಗಿದೆ. ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳು ಹಿಂಜರಿಕೆಯಿಲ್ಲದೆ ಸಹಾಯ ಕೇಳಬೇಕು. ನಾನು ಕೂಡ ಎಲ್ಲ ಸಂದರ್ಭದಲ್ಲೂ ಸಹಾಯ ಮಾಡುತ್ತೇನೆ. ಸಂಘ-ಸಂಸ್ಥೆಗಳು, ದಾನಿಗಳು ಕೂಡ ಶಿಕ್ಷಣ ಮುಂದುವರಿಸಲು ಅವಶ್ಕಕತೆ ಇದ್ದವರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎ.ಆರ್.ಮುತ್ತಣ್ಣ ಮಾತನಾಡಿ, 2005ರಲ್ಲಿ ಎಲ್‌ಕೆಜಿ ಯಿಂದ ಪ್ರಾರಂಭವಾದ ವಿದ್ಯಾಸಂಸ್ಥೆ ಪ್ರಸ್ತುತ ದೊಡ್ಡದಾಗಿ ಬೆಳೆದಿದೆ. ಕಳೆದ 9 ವರ್ಷಗಳಿಂದ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯಲಾಗಿದೆ. ಪ್ರಸಕ್ತ ವರ್ಷ ಜಿಲ್ಲಾ ಮಟ್ಟದಲ್ಲಿ ಮೂರು ರ‌್ಯಾಂಕ್‌ಗಳು ನಮ್ಮ ಕುವೆಂಪು ವಿದ್ಯಾಸಂಸ್ಥೆಗೆ ಸಿಕ್ಕಿವೆ. ಪಿಯುಸಿ ವಿಭಾಗದ ವಿಜ್ಞಾನ ವಿಭಾಗದಲ್ಲೂ ಶೇ.100ರಷ್ಟು ಫಲಿತಾಂಶ ಸಿಕ್ಕಿದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಿ.ಎಸ್.ಆದ್ವಿ, ( ರಾಜ್ಯಕ್ಕೆ 3ನೇ ರ‌್ಯಾಂಕ್) ಕೆ.ಸಿ.ಪಂಚಮಿ ( ರಾಜ್ಯಕ್ಕೆ 4ನೇ ರ‌್ಯಾಂಕ್), ಕೆ.ಎಸ್.ತೇಜಸ್ವಿನಿ( ರಾಜ್ಯಕ್ಕೆ 5ನೇ ರ‌್ಯಾಂಕ್) ಹಾಗು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಮ್ಮದ್ ಇರ್ಮಾನ್, ಎಸ್.ವೈ. ಹಿಮಾನಿ, ವೈ.ಎಸ್.ಧನ್ಯಾ, ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಕೆ.ಎಂ.ಸೃಷ್ಟಿ, ಎಂ.ಡಿ.ಖುಷಿ, ಡಿ.ಎಸ್.ಸ್ನೇಹ ಅವರನ್ನ ಇದೇ ವೇಳೆ ಗೌರವಿಸಲಾಯಿತು. ಜತೆಗೆ ದಾನಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿಗಳಾದ ಕೆ.ಟಿ.ಬೆಳ್ಳಿಗೌಡ, ಮಂಜೂರು ತಮ್ಮಣಿ, ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್ ಕುಮಾರ್, ಗೌರವ ಕಾರ್ಯದರ್ಶಿ ಎನ್.ಬಿ.ಗಣಪತಿ, ಖಜಾಂಚಿ ಜಿ.ಪಿ.ಲಿಂಗರಾಜು, ವಿದ್ಯಾಸಂಸ್ಥೆಯ ಭಾತ್ಮೀದಾರರಾದ ಕೆ.ಎಂ.ಜಗದೀಶ್, ಸಮುದಾಯಭವನ ಉಸ್ತುವಾರಿ ಕೆ.ಟಿ.ಪರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮತ್ತು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್, ನಗರ ಗೌಡ ಒಕ್ಕೂಟದ ಅಧ್ಯಕ್ಷ ಎಂ.ಎಂ.ಪ್ರಕಾಶ್ ಇತರರು ಇದ್ದರು.
.