ಮಡಿಕೇರಿ:
ಜಿಲ್ಲೆಯ ಶಿಕ್ಷಣ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಕೊಡಗು ವಿಶ್ವವಿದ್ಯಾಲಯ ಅಂಬೆಗಾಲು ಇಡುತ್ತಿರುವ ಹಂತದಲ್ಲೇ ಕಣ್ಣು ಮುಚ್ಚುವುದು ಬಹುತೇಕ ಖಚಿತವಾಗಿದೆ. ಕಳೆದ ಗುರುವಾರ (ಫೆ.13) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಕೊಡಗು ವಿವಿ ಸೇರಿದಂತೆ 9 ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಈ ಸಂಬAಧ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳಲಿದೆ ಎನ್ನಲಾಗಿದೆ.
ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಘೋಷಣೆಯಂತೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ನಂತರ ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಕೊಡಗು, ಹಾಸನ, ಬಾಗಲಕೋಟೆ, ಕೊಪ್ಪಳ, ಬೀದರ್, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು. 2023-24ನೇ ಸಾಲಿನಿಂದ ಇಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಆರಂಭವಾಗುವ ಮೂಲಕ ವಿಶ್ವವಿದ್ಯಾಲಯದ ಚಟುವಟಿಕೆ ಅಧಿಕೃತವಾಗಿ ಶುರುವಾಗಿತ್ತು. ಆದರೆ ವಿಶ್ವವಿದ್ಯಾಲಯ ಆರಂಭವಾಗಿ 2 ವರ್ಷ ಕಳೆದಿದ್ದರೂ ಸರ್ಕಾರದಿಂದ ಯಾವುದೇ ಅನುದಾನ ಬಂದಿರಲಿಲ್ಲ.
ಸರ್ಕಾರದ ಅನುದಾನ ಇಲ್ಲದಿದ್ದರೂ ಕೊಡಗು ವಿಶ್ವವಿದ್ಯಾಲಯ ಇತರ ನೂತನ ವಿಶ್ವವಿದ್ಯಾಲಯಗಳಿಗೆ ಮಾದರಿ ಎನ್ನುವ ರೀತಿಯಲ್ಲಿ ತನ್ನ ಚಟುವಟಿಕೆ ನಡೆಸುತ್ತಿತ್ತು. ಇದೀಗ ಸರ್ಕಾರ ಕೊಡಗು ವಿವಿಯನ್ನು ಮುಚ್ಚಲು ತೀರ್ಮಾನಿಸಿದೆ ಎನ್ನುವ ಮಾಹಿತಿ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೊಡಗಿಗೆ ವಿಶ್ವವಿದ್ಯಾಲಯ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಹಿಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೊಡಗು ಬಂದ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ಮಧ್ಯೆ ಕೊಡಗು ವಿವಿ ಉಳಿಸಿಕೊಳ್ಳಲು ಕೊಡಗು ವಿವಿ ಹಿತರಕ್ಷಣಾ ಬಳಗ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದಲ್ಲದೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲೂ ನಿರ್ಧರಿಸಲಾಗಿದೆ. ಮತ್ತೊಂದು ಕಡೆ ಕೊಡಗು ವಿವಿ ಅಸ್ತಿತ್ವ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನ ನನ್ನಂಥ ಎಷ್ಟೋ ವಿದ್ಯಾರ್ಥಿಗಳು ಕೊಡಗು ವಿವಿಯಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂಬ ಆಸೆ ಇಟ್ಟುಕೊಂಡಿದ್ದೇವೆ. ಬಿಎಸ್‌ಸಿಯನ್ನ ಹೊರ ಜಿಲ್ಲೆಯಲ್ಲಿ ಮಾಡಲೇಬೇಕಾದ ಅನಿವಾರ್ಯತೆ ಇದೆ. ಸಿಕ್ಕಿದ ವಿವಿಯನ್ನು ಕಾಪಾಡಿಕೊಳ್ಳಬೇಕು. ಕೊಡಗಿನ ಶಾಸಕರು ಮತ್ತು ಸಂಸದರು ವಿವಿಯನ್ನು ಮುಚ್ಚುವುದಕ್ಕೆ ಅವಕಾಶ ಮಾಡಿಕೊಡಬಾರದು.
ಎಚ್.ಆರ್. ಜೀವಿತಾ, ಪಿಯು ವಿದ್ಯಾರ್ಥಿನಿ, ಹಿರಿಕರ ಗ್ರಾಮ, ಸೋಮವಾರಪೇಟೆ
ಹಿಂದಿನ ಸರ್ಕಾರ ಕೊಡಗಿನ ಒಳಿತಿಗಾಗಿ ಸ್ಥಾಪಿಸಿದ್ದ ಕೊಡಗು ವಿಶ್ವ ವಿದ್ಯಾಲಯವನ್ನು ಈಗಿನ ಸರ್ಕಾರ ಯಾವುದೋ ದುರುದ್ದೇಶದಿಂದ ಆರ್ಥಿಕ ಸಂಕಷ್ಟ ಮತ್ತು ಸ್ಥಳಾವಕಾಶದ ಕೊರತೆಯೆಂಬ ಕುಂಟುನೆಪ ನೀಡಿ ಮುಚ್ಚುವ ಹುನ್ನಾರ ನಡೆಸಿದೆ. ಇದನ್ನು ಕೊಡಗಿನ ಇಬ್ಬರು ಶಾಸಕರು ವಿರೋಧ ವ್ಯಕ್ತಪಡಿಸದೆ ದೀರ್ಘ ಮೌನಕ್ಕೆ ಶರಣಾಗಿದ್ದಾರೆ. ಇದು ತುಂಬಾ ಆಶ್ಚರ್ಯ ಹಾಗೂ ಶೋಚನೀಯ ಸಂಗತಿಯಾಗಿದೆ. ಇದನ್ನು ಕೊಡಗಿನ ಮಹಾಜನತೆ ಒಟ್ಟಾಗಿ ಪ್ರತಿಭಟಿಸಬೇಕಾಗಿದೆ.
ಬಗ್ರಿನ್ ಬೋಪಣ್ಣ, ವಿರಾಜಪೇಟೆ
ಕೊಡಗು ವಿಶ್ವ ವಿದ್ಯಾಲಯದ ಕೊಡಗಿನಲ್ಲಿ ಸ್ಥಾಪನೆ ಆಗಿದ್ದು ಒಳ್ಳೆಯ ಬೆಳವಣಿಗೆ. ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇನ್ನಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಿ. ಈ ಹಿಂದೆ ಸ್ಥಾಪನೆ ಮಾಡುವಾಗಲೇ ಎಲ್ಲಾ ಸೌಲಭ್ಯಗಳನ್ನು ನೀಡಬೇಕಿತ್ತು. ಇದೀಗ ಈ ವಿಶ್ವವಿದ್ಯಾಲಯ ಮುಚ್ಚದಿರಲಿ. ಕೊಡಗಿನ ಎಲ್ಲರೂ ಈ ವಿಚಾರದಲ್ಲಿ ಒಂದಾಗಬೇಕಿದೆ.
ಚೈತ್ರಾ, ಗ್ರಾಮ ಪಂಚಾಯತ್ ಸದಸ್ಯೆ, ಹಂಡ್ಲಿ
ಕೊಡಗು ಈ ಹಿಂದೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿತ್ತು. ಇಲ್ಲಿಯ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತಿದ್ದರು. ಅದನ್ನು ಮನಗಂಡು ಈ ಹಿಂದಿನ ಸರ್ಕಾರ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಮೂಲಕ ಕೊಡಗಿನ ಕಳೆ ಹೆಚ್ಚುವಂತೆ ಮಾಡಿತ್ತು. ಆದರೆ ಇದೀಗ ಮುಚ್ಚುವ ನಿರ್ಧಾರ ಮಾಡಿರುವುದು ದುರಂತ. ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಬೇಕು.
ಪವನ್ ದೇವಯ್ಯ, ಉದ್ಯಮಿ, ನಂದಿಗುAದ
ಕೊಡಗು ಸೇರಿದಂತೆ ರಾಜ್ಯದ ವಿವಿಧ 9 ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿಯ ನಿಲುವು ಅತ್ಯಂತ ವಿಷಾದಕರ ಮತ್ತು ಖಂಡನೀಯ.
ಕೊಡಗು ವಿವಿ ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ಇಲ್ಲದಿದ್ದರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ.
ಕೊಡಗು ವಿಶ್ವವಿದ್ಯಾಲಯ ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕು.
ಗಿರೀಶ್, ಸಿದ್ದಾಪುರ
ಕೊಡಗು ವಿಶ್ವವಿದ್ಯಾಲಯಕ್ಕೆ ಕೆಲವೇ ಕಾಲೇಜುಗಳು ಒಳಗೊಂಡಿರುವುದರಿAದ ಆಂತರಿಕ ಅನುದಾನದ ಕೊರತೆ ಉಂಟಾಗಿದೆ. ಅನುದಾನದ ಕೊರತೆಯಿಂದ ಹೆಚ್ಚಿನ ಬೋಧಕ ಸಿಬ್ಬಂದಿ ಇಲ್ಲದೆ ವಿದ್ಯಾರ್ಥಿಗಳಿಗೆ ಸಾಕಷ್ಟ ತೊಂದರೆಗಳಾಗುತ್ತಿದೆ. ಇರುವ ಬೋಧಕ ಸಿಬ್ಬಂದಿ ಕೂಡ ತ್ರಿಶಂಕು ಪರಿಸ್ಥಿತಿಯಲ್ಲಿರುವಂತಾಗಿದೆ. ಆದ್ದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಆಂತರಿಕ ಅನುದಾನಗಳನ್ನು ವೃದ್ಧಿಪಡಿಸಿ ವಿಶ್ವವಿದ್ಯಾಲಯಕ್ಕೆ ಉತ್ತಮ ದರ್ಜೆಯನ್ನು ನೀಡಿ ವಿದ್ಯಾರ್ಥಿಗಳನ್ನು ಕೊಡಗು ವಿಶ್ವ ವಿದ್ಯಾಲಯದತ್ತ ಆಕರ್ಷಿಸುವಂತೆ ಮಾಡಿದರೆ ಕೊಡಗಿನ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯೊಂದಿಗೆ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುತ್ತದೆ.
ಪುದಿಯನೆರವನ ರಿಷಿತ್ ಮಾದಯ್ಯ, ಪಾಲೂರು, ಮಡಿಕೇರಿ.
ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚಿ ಈಗಿನ ಕೇಂದ್ರವನ್ನು ಮಾತೃ ವಿವಿ ಜತೆ ಸೇರಿಸಬೇಕು. ಜಿಲ್ಲೆಗೊಂದು ವಿಶ್ವವಿದ್ಯಾಲಯದ ಅವಶ್ಯಕತೆಯೇ ಇಲ್ಲ. ಕೊಡಗು ವಿವಿಯಿಂದ ಯಾವುದೇ ಪ್ರಯೋಜನ ಇಲ್ಲ. ಅಲ್ಲಿ 9 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಇತಿಹಾಸ ವಿಭಾಗವನ್ನು ಮುಚ್ಚಿದ್ದಾರೆ. ಅದೊಂದು ಕುಟುಂಬ ವಿಶ್ವವಿದ್ಯಾಲಯದಂತೆ ಆಗಿದೆ.
ಡಾ. ಅರುಣ್ ಕುಮಾರ್, ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ಕೊಡಗು ವಿವಿ ಸೇರಿದಂತೆ ನೂತನ ವಿಶ್ವವಿದ್ಯಾಲಯಗಳ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಸಂಪುಟ ಉಪಸಮಿತಿಯಲ್ಲಿ ಚರ್ಚೆ ನಡೆದಿದೆಯೇ ಹೊರತೂ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಕೊಡಗಿನಂಥ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳು ದೂರದ ಪ್ರದೇಶಕ್ಕೆ ತೆರಳಿ ವ್ಯಾಸಂಣಗ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇಂದಿಗೂ ಇದೆ. ಹಾಗಾಗಿ ಉನ್ನತ ಶಿಕ್ಷಣ ಪಡೆಯಲು ಕೊಡಗು ವಿವಿಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕವಾಗಿ ಸರ್ಕಾರ ಮುನ್ನಡೆಯುತ್ತದೆ ಎನ್ನುವ ಆಶಯ ನಮ್ಮದು.
ಪ್ರೊ. ಅಶೋಕ್ ಸಂಗಪ್ಪ ಆಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ
ಅನುದಾನದ ನೆಪ ಕೊಟ್ಟು ಕೊಡಗು ವಿವಿ ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರ ಸರಿಯಲ್ಲ. ಒಂದು ವೇಳೆ ಕೊಡಗು ವಿವಿ ಮುಚ್ಚಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ, ಕೊಡಗು ಬಂದ್ ನಡೆಸಲಾಗುವುದು. ಕೊಡಗು ವಿವಿಗೆ ಕಳೆದ 2 ವರ್ಷದಿಂದ ಯಾವುದೇ ಅನುದಾನ ಬಾರದಿದ್ದರೂ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕೊಡಗಿಗೆ ಬರುವ ಯೋಜನೆಗಳ ವಿಚಾರದಲ್ಲಿ ರಾಜಕೀಯ ಮಾಡಬಾರದು.
ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ
ಈ ಹಿಂದಿನ ಸರ್ಕಾರ ಕೊಡಗು ವಿಶ್ವ ವಿದ್ಯಾಲಯಕ್ಕೆ ಯಾವುದೇ ಅನುದಾನ ಮೀಸಲಿಡದೇ ಅವಸರದಿಂದ ಆರಂಭಿಸಿತ್ತು. ಇದೀಗ ಸಚಿವ ಸಂಪುಟದ ಉಪಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ವಿಶ್ವವಿದ್ಯಾಲಯ ಮುಚ್ಚಲು ಶಿಫಾರಸ್ಸು ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಸಮಿತಿ ಶಿಫಾರಸ್ಸು ಗಮನಿಸಲಾಗುಂವುದು. ಸರ್ಕಾರದ ಮೇಲೆ ಒತ್ತಡ ಹೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಈ ಬಗ್ಗೆ ಸಂಬAಧಿಸಿದ ಸಚಿವರೊಂದಿಗೂ ಚರ್ಚಿಸಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ