ಜಿಲ್ಲೆ

ಕೊಡಗು ವಿವಿ ಅಳಿವು-ಉಳಿವು ನಿರ್ಧಾರ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಿಲ್ಲೆಯ ಶಿಕ್ಷಣ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದ ಕೊಡಗು ವಿಶ್ವವಿದ್ಯಾಲಯ ಅಂಬೆಗಾಲು ಇಡುತ್ತಿರುವ ಹಂತದಲ್ಲೇ ಮುಚ್ಚಲಿದೆಯಾ ? ಇಂಥದ್ದೊAದು ಚರ್ಚೆ ಕೊಡಗಿನಲ್ಲಿ ಈಗ ಶುರುವಾಗಿದೆ. ಗುರುವಾರ (ಫೆ.13) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಕೊಡಗು ವಿವಿಯ ಭವಿಷ್ಯ ನಿರ್ಧಾರ ಆಗಲಿದೆ. ಮತ್ತೊಂದು ಕಡೆ ಒಂದು ವೇಳೆ ಕೊಡಗು ವಿವಿ ಬಂದ್ ನಿರ್ಧಾರ ಹೊರಬಿದ್ದರೆ ಇದರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನಕ್ಕೂ ಸಿದ್ಧತೆ ನಡೆದಿದೆ.

ಜಿಲ್ಲೆಗೊಂದು ಯೂನಿವರ್ಸಿಟಿ ಎಂಬ ಘೋಷಣೆಯಂತೆ ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ನಂತರ ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಕೊಡಗು, ಹಾಸನ, ಬಾಗಲಕೋಟೆ, ಕೊಪ್ಪಳ, ಬೀದರ್, ಚಾಮರಾಜನಗರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಒಟ್ಟು 7 ವಿಶ್ವವಿದ್ಯಾಲಯಗಳನ್ನು ಆರಂಭಿಸಿತ್ತು. 2023-24ನೇ ಸಾಲಿನಿಂದ ಇಲ್ಲಿ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಆರಂಭವಾಗುವ ಮೂಲಕ ವಿಶ್ವವಿದ್ಯಾಲಯದ ಚಟುವಟಿಕೆ ಅಧಿಕೃತವಾಗಿ ಶುರುವಾಗಿತ್ತು.

ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಕೊಡಗು ವಿಶ್ವವಿದ್ಯಾಲಯ ತನ್ನ ಚಟುವಟಿಕೆ ಶುರು ಮಾಡಿತ್ತು. ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ಪುರುಷ ಮತ್ತು ಮಹಿಳೆಯರ ವಸತಿ ನಿಲಯಗಳು ಹಾಗೂ ವಸತಿಗೃಹ ಕಟ್ಟಡಗಳನ್ನು ಒಳಗೊಂಡ ಸುಸಜ್ಜಿತ ಕ್ಯಾಂಪಸ್ ನೂತನ ವಿಶ್ವ ವಿದ್ಯಾಲಯದ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಿತ್ತು. ಆದರೆ ಬಿಜೆಪಿ ಸರ್ಕಾರದ ಅಧಿಕಾರದ ಕೊನೆಯ ದಿನಗಳಲ್ಲಿ ರಚನೆಗೊಂಡ ಕೊಡಗು ಸೇರಿದಂತೆ ಏಳು ವಿಶ್ವ ವಿದ್ಯಾಲಯಗಳೂ ಈಗಿನ ಕಾಂಗ್ರೆಸ್ ಸರ್ಕಾರದ ಅವಕೃಪೆಗೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ತಲುಪಿದೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಈತನಕ ನೂತನ ವಿಶ್ವವಿದ್ಯಾಲಯಗಳಿಗೆ ಯಾವುದೇ ಅನುದಾನ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾದ ಯೋಜನೆ ಇದಾಗಿದ್ದು, ವಿವಿಗಳನ್ನು ಮುಚ್ಚುವ ಹವಣಿಕೆಯಿಂದಲೇ ಅನುದಾನ ಒದಗಿಸದೇ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹಾಗಾಗಿಯೇ ಗುರುವಾರ (ಫೆ.13) ಬೆಂಗಳೂರಿನಲ್ಲಿ ನಡೆಯಲಿರುವ ಸಭೆ ನಿರೀಕ್ಷೆ ಮೂಡಿಸಿದೆ.

ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತಂದು ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಾಪಿಸಿರುವ ಹೊಸ ವಿವಿಗಳ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಉಪ ಸಮಿತಿ ಸಭೆ ಗುರುವಾರ (ಫೆ.13) ಬೆಂಗಳೂರಿನಲ್ಲಿ ನಿಗಧಿಯಾಗಿದೆ. ನಿರ್ವಹಣೆಗೆ ಹಣಕಾಸಿನ ಕೊರತೆ ನೆಪ ಕೊಟ್ಟು ಕೊಡಗು ಸೇರಿದಂತೆ ರಾಜ್ಯದ ಏಳು ನೂತನ ವಿವಿಗಳನ್ನು ಮುಚ್ಚುವ ನಿರ್ಧಾರ ಈ ಸಭೆಯಲ್ಲಿ ಪ್ರಕಟವಾಗಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ಕೊಡಗು ವಿವಿ ಮುಚ್ಚಿದರೆ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಹಾಲಿ ದಾಖಲಾಗಿರುವ ವಿದ್ಯಾರ್ಥಿಗಳ ಭವಿಷ್ಯ ತ್ರಿಶಂಕು ಸ್ಥಿತಿ ತಲುಪಲಿದೆ.

ಕೊಡಗಿನ ಒಂದು ಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಮತ್ತೊಂದು ಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯ ಇದೆ. ಆದರೂ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಶೇ. 15 ಮಾತ್ರ. ಪಕ್ಕದ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.25 ರಿಂದ 30 ರಷ್ಟಿದೆ. ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆಯುವ ಆಸೆ ಹೆಣ್ಣುಮಕ್ಕಳು ಮತ್ತು ಅವರ ಪೋಷಕರಿಗೆ ಇದ್ದರೂ ದೂರದ ನಗರಗಳಿಗೆ ಕಳಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು, ಬಡತನ, ಕೊಡಗಿನಂಥ ಗುಡ್ಡಗಾಡು ಪ್ರದೇಶಗಳ ಮಕ್ಕಳು ದೂರದ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕಡಿಮೆ ಇದೆ.

ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬಹು ಹತ್ತಿರದಲ್ಲೇ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಈ ಹಿಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪ್ರಯತ್ನದ ಫಲವಾಗಿ ಮಂಗಳೂರು ವಿಶ್ವವಿದ್ಯಾಲಯ ಅಧೀನದಲ್ಲಿ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರವನ್ನು ಚಿಕ್ಕಅಳುವಾರದಲ್ಲಿ ಆರಂಭಿಸಲಾಗಿತ್ತು. ನಂತರ ಅವರ ಕನಸಿನಂತೆ ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಒತ್ತಾಸೆ ಫಲವಾಗಿ ಇದೇ ಕ್ಯಾಂಪಸ್‌ನಲ್ಲಿ ಕೊಡಗು ವಿವಿ ಆರಂಭವಾಗಲು ಕೂಡ ರಂಜನ್ ಶ್ರಮ ಹಾಕಿದ್ದರು.

ಹೊಸ ವಿವಿಗಳನ್ನು ಬಿಜೆಪಿ ಸರ್ಕಾರ ಘೋಷಣೆ ಮಾಡಿದ ಬಳಿಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ವಿಶ್ವವಿದ್ಯಾಲಯಗಳಿಗೆ ಯಾವುದೇ ಅನುದಾನ ಕೊಟ್ಟಿಲ್ಲ. ಆದರೂ ಕೊಡಗು ಸೇರಿದಂತೆ ಹೊಸದಾಗಿ ಆರಂಭವಾದ ಏಳು ವಿವಿಗಳ ಕುಲಪತಿಗಳು ತಮ್ಮ ವ್ಯಾಪ್ತಿಯ ಮಹಾವಿದ್ಯಾಲಯಗಳ ಸಂಯೋಜನೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಪದವಿ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆ ಹಾಗೂ ಸ್ನಾತಕೋತ್ತರ ಶಿಕ್ಷಣದ ನೋಂದಣಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲಾಗಿದೆ. ಯುಜಿಸಿಯಿಂದ 2 ಎಫ್ ಮಾನ್ಯತೆಯನ್ನೂ ಪಡೆಯಲಾಗಿದೆ. ಸರ್ಕಾರಗಳಿಂದ ದೊರಕಬಹುದಾದ ವಿವಿಧ ರೀತಿಯ ಅನುದಾನಗಳಿಗಾಗಿ 12 ಬಿ ಪ್ರಕ್ರಿಯೆಗಳು ಕೂಡ ನಡೆದಿವೆ. ಕಳೆದ ವರ್ಷ ಆ. 18 ರಂದು ಮೂಲ ವಿಶ್ವವಿದ್ಯಾನಿಲಯಗಳಿಂದ ಹೊಸ ವಿವಿಗಳನ್ನು ಬೇರ್ಪಡಿಸುವ ಸಂಬAಧ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಸರ್ಕಾರ ಈ ಹೊಸ ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡುತ್ತಿರುವುದರ ಹಿಂದಿನ ಕಾರಣ ಚರ್ಚೆ ಹುಟ್ಟುಹಾಕಿದೆ.

ಆರಂಭದಿAದಲೂ ಕೊಡಗು ವಿಶ್ವವಿದ್ಯಾಲಯ ಅಸ್ತಿತ್ವದ ಪ್ರಶ್ನೆ ರಾಜಕೀಯ ಪ್ರತಿಷ್ಠೆಯಾಗಿ ಕಾಡುತ್ತಿದ್ದರೂ ಕುಲಪತಿ ಪ್ರೊ. ಅಶೋಕ್ ಎಸ್. ಆಲೂರ, ಈ ಹಿಂದಿನ ರಿಜಿಸ್ಟಾçರ್ ಡಾ. ಸೀನಪ್ಪ ಹಾಗೂ ಈಗಿನ ರಿಜಿಸ್ಟಾçರ್ ಪ್ರೊ. ಎಂ. ಸುರೇಶ್ ನೂತನ ವಿಶ್ವವಿದ್ಯಾಲಯಕ್ಕೆ ಗಟ್ಟಿಯಾದ ತಳಪಾಯ ಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ವಿವಿಯಲ್ಲಿ ಈತನಕ ನಡೆದಿರುವ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪರೀಕ್ಷೆ ನಡೆದ ಕೇವಲ 20 ದಿನಗಳಲ್ಲಿ ಪ್ರಕಟಿಸಿದ ಹೆಗ್ಗಳಿಗೆ ವಿವಿಯದ್ದಾಗಿದೆ. ರಾಜ್ಯದ ಕೆಲವೊಂದು ಉದ್ಯಮ ಸಂಸ್ಥೆಗಳೊAದಿಗೆ ಒಡಂಬಡಿಕೆ ಮಾಡಿಕೊಂಡು ಇತ್ತೀಚೆಗಷ್ಟೇ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ತರಬೇತಿಯನ್ನೂ ಆರಂಭಿಸಲಾಗಿದೆ. ಶಾಸಕ ಡಾ. ಮಂತರ್ ಗೌಡ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಈಚೆಗೆ ಇದನ್ನು ಉದ್ಘಾಟಿಸಿದ್ದರು.

ಜಿಲ್ಲೆಯ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ, ಪಂಗಡಗಳ, ಹಿಂದುಳಿದ ಇನ್ನೂ ಅನೇಕ ಸಮುದಾಯಗಳ ಬಡ ಮಕ್ಕಳ ಉನ್ನತ ವ್ಯಾಸಂಗದ ದೃಷ್ಟಿಯಿಂದ ಕೊಡಗು ವಿವಿ ಸ್ಥಾಪಿಸಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಈತನಕ ಈ ವಿವಿಗಳ ಬಗ್ಗೆ ಕಿಂಚಿತ್ತು ಕಾಳಜಿ ವಹಿಸದೇ, ಯಾವುದೇ ಅನುದಾನವನ್ನೂ ನೀಡದೇ ಇದೀಗ ಮುಚ್ಚುವ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ, ಕೊಡಗಿನ ಪ್ರಜ್ಞಾವಂತ ಜನರನ್ನು ಸೇರಿಸಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು.

ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ

ಹೊಸದಾಗಿ ರಚನೆಯಾಗಿರುವ ಕೊಡಗು ವಿವಿ ಯನ್ನು ಮುಚ್ಚುವ ಯಾವ ನಿರ್ಧಾರವೂ ಸರ್ಕಾರದ ಮುಂದೆ ಇಲ್ಲ. ಗುರುವಾರ (ತಾ.13) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಉಪ ಸಮಿತಿ ಸಭೆ ವಿವಿಗಳ ಸಾಧಕ ಬಾಧಕಗಳನ್ನು ತಿಳಿಯಲು ನಿಗಧಿಪಡಿಸಿದ ಸಭೆಯಾಗಿದೆ. ಯಾವ ಕಾರಣಕ್ಕೂ ಕೊಡಗು ಜಿಲ್ಲೆಗೆ ಬಂದಿರುವ ವಿವಿಯನ್ನು ಮುಚ್ಚಲು ಬಿಡುವುದಿಲ್ಲ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ