ಜಿಲ್ಲೆ

ಕೊಡಗು ವಿವಿಯಲ್ಲಿ ಕೌಶಲ್ಯಾಭಿವೃದ್ಧಿ ಡಿಪ್ಲಮೋ ಕೋರ್ಸ್ ಆರಂಭ

ಸುನಿಲ್ ಪೊನ್ನೇಟಿ

ಮಡಿಕೇರಿ:

ಉತ್ತಮ ಉದ್ಯೋಗಾವಕಾಶ ಪಡೆಯುವ ನಿಟ್ಟಿನಲ್ಲಿ ಪದವಿಯ ಜತೆಯಲ್ಲಿ ಕೌಶಲ್ಯಾಭಿವೃದ್ಧಿ ಅತ್ಯವಶ್ಯಕವಾಗಿದ್ದು ವಿದ್ಯಾಭ್ಯಾಸದೊಂದಿಗೆ ಕೌಶಲ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಕೊಡಗು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ದಿ ಡಿಪ್ಲಮೋ ಕೋರ್ಸ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಉದ್ಯೋಗ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ಹೊಸ ತಂತ್ರಜ್ಞಾನ ಅಳವಡಿಕೆಯಿಂದಾಗಿ ಉದ್ಯೋಗ ನಿರ್ವಹಣೆಗೆ ಬೇಕಾದಂಥ ಅವಶ್ಯಕತೆಗಳು ಬದಲಾಗಿವೆ. ಇವುಗಳನ್ನ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲು ರಾಜ್ಯ ಸÀರ್ಕಾರ ಆದ್ಯತೆ ನೀಡಿದೆ. ಹಾಗೆಯೇ, ಅಗತ್ಯ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳು ಉತ್ತಮ ಅವಕಾಶ ಪಡೆಯಲು ಹಾಗೂ ಉದ್ಯೋಗದಲ್ಲಿ ಪ್ರಸ್ತುತರಾಗಿರಲು ತಮ್ಮ ಕ್ಷೇತ್ರದಲ್ಲಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕು. ಕೊಡಗು ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಪದವಿಯ ಜತೆಯಲ್ಲಿಯೇ ಸ್ಕಿಲ್ ಡೆವಲಪ್‌ಮೆಂಟ್ ಡಿಪ್ಲಮೋ ಕೋರ್ಸ್ನ್ನು ಉಚಿತವಾಗಿ ಪಡೆಯಲು ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯ. ಕೊಡಗು ವಿಶ್ವವಿದ್ಯಾನಿಯಲದ ಅಭಿವೃದ್ದಿಗೆ ಸÀರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ವಿದ್ಯಾಭ್ಯಾಸದ ಜತೆಯಲ್ಲಿಯೇ ಕೌಶಲ್ಯಾಭಿವೃದ್ದಿಗೆ ಅನುವು ಮಾಡಿಕೊಡುವಂಥ ಅವಕಾಶಗಳು ದೊರೆಯುವುದು ವಿರಳ. ಆದರೆ, ರಾಜ್ಯದಲ್ಲೇ ಮೊದಲ ಬಾರಿಗೆ ಕೊಡಗು ವಿಶ್ವವಿದ್ಯಾಲಯದಲ್ಲಿ ಇಂಥ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಉಚಿತವಾಗಿ ತಮ್ಮ ಕೌಶಲ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯೋಗ ಪಡೆದುಕೊಂಡ ನಂತರವೂ ಕೌಶಲ್ಯ ವೃದ್ಧಿಸಿಕೊಳ್ಳಲು ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಆಲೂರ್, ರಿಜಿಸ್ಟಾçರ್ ಸುರೇಶ್ ಸೇರಿದಂತೆ ಅಧಿಕಾರಿಗಳು ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಡಿಪ್ಲಮೋ ಕೋರ್ಸ್ನ ಪಠ್ಯಪುಸ್ತಕಗಳ ಕಿಟ್‌ನ್ನು ಹಾಗೂ ಕೌಶಲ್ಯಾಭಿವೃದ್ದಿ ತರಬೇತಿ ಪಡೆದ ಉಪನ್ಯಾಸಕರುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.