ಮಡಿಕೇರಿ:
ರಾಜ್ಯದಲ್ಲಿ ಹೊಸದಾಗಿ ಆರಂಭವಾಗಿರುವ ಕೊಡಗು ವಿಶ್ವಾವಿದ್ಯಾಲಯ ಸೇರಿದಂತೆ 7 ವಿಶ್ವವಿದ್ಯಾಲಯಗಳು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ಪಾರಾದಂತಿದೆ. ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸದೃಢಗೊಳಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿಧಾನಪರಿಷತ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಸಚಿವರ ಈ ಭರವಸೆಯ ಮಾತುಗಳು ಜಿಲ್ಲೆಯ ಶಿಕ್ಷಣ ಪ್ರೇಮಿಗಳಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ.
2022-23ರ ಸಾಲಿನ ಬಜೆಟ್ ಘೋಷಣೆಯಂತೆ ರಾಜ್ಯದಲ್ಲಿ ಕೊಡಗು ವಿಶ್ವವಿದ್ಯಾಲಯ ಸೇರಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸರ್ಕಾರ 2023ರಲ್ಲಿ ಆರಂಭಿಸಿತ್ತು. ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ಕ್ಕೆ ತಿದ್ದುಪಡಿ ತರುವ ಮೂಲಕ ಹಾಸನ, ಚಾಮರಾಜನಗರ, ಕೊಡಗು, ಬೀದರ್, ಹಾವೇರಿ, ಬಾಗಲಕೋಟೆ ಹಾಗೂ ಕೊಪ್ಪಳ ವಿಶ್ವವಿದ್ಯಾಲಯಗಳನ್ನು ಶುರು ಮಾಡಲಾಗಿತ್ತು. ಮಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಶಾಲನಗರ ತಾಲೂಕು ಚಿಕ್ಕ ಅಳುವಾರದ ಕ್ಯಾಂಪಸ್‌ನಲ್ಲಿ 2023-24ನೇ ಸಾಲಿನಿಂದ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶಾತಿ ಆರಂಭವಾಗುವ ಮೂಲಕ ಕೊಡಗು ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿತ್ತು.
ನಂತರ ಚುನಾವಣೆ ನಡೆದು ಸರ್ಕಾರ ಬದಲಾದ ಮೇಲೆ ನೂತನ ವಿಶ್ವವಿದ್ಯಾಲಯಕ್ಕೆ ಯಾವುದೇ ಅನುದಾನ ಬಂದಿರಲಿಲ್ಲ. ಆದರೆ ಕೊಡಗು ವಿಶ್ವವಿದ್ಯಾಲಯದಲ್ಲಿ ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಇತರ ನೂತನ ವಿವಿಗಳಿಗೆ ಮಾದರಿ ಆಗುವ ರೀತಿಯಲ್ಲಿ ಚಟುವಟಿಕೆಗಳು ನಡೆಯುತ್ತಿದ್ದ ಹಂತದಲ್ಲೇ ಸರ್ಕಾರ ವಿವಿ ಮುಚ್ಚುವ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಸುದ್ದಿ ಸ್ಥಳೀಯವಾಗಿಯೇ ಉನ್ನತ ಶಿಕ್ಷಣ ಪಡೆಯುವ ಕನಸು ಕಾಣುತ್ತಿದ್ದವರನ್ನು ಭ್ರಮನಿರಸನಗೊಳಿಸುವಂತೆ ಮಾಡಿತ್ತು.
ಆದರೆ ಇದೀಗ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ವಿಧಾನಪರಿಷತ್‌ನಲ್ಲಿ ಎಂಎಲ್‌ಸಿ ಹೆಚ್.ಎಸ್. ಗೋಪಿನಾಥ್ ಅವರಿಗೆ ನೀಡಿರುವ ಉತ್ತರ ಆತಂಕದಲ್ಲಿ ಇದ್ದವರಿಗೆ ಸ್ವಲ್ಪ ಭರವಸೆ ತುಂಬುವAತೆ ಮಾಡಿದೆ. ರಾಜ್ಯದಲ್ಲಿರುವ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವಂತೆ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ಫೆ.13 ಮತ್ತು ಮೇ 9ಕ್ಕೆ ಸಭೆಗಳನ್ನು ನಡೆಸಿದೆ.
ಸಮಿತಿ ಇಲ್ಲಿಯವರೆಗೆ ಯಾವುದೇ ಶಿಫಾರಸ್ಸುಗಳನ್ನು ನೀಡಿರುವುದಿಲ್ಲ. ಈ ಸಮಿತಿ ನೀಡುವ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸಚಿವ ಸಂಪುಟದ ಮುಂದೆ ಮಂಡಿಸಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವಂತೆ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿ ಈತನಕ 2 ಸಭೆಗಳನ್ನು ನಡೆಸಿದ್ದರೂ ಸರ್ಕಾರÀಕ್ಕೆ ಯಾವುದೇ ಶಿಫಾರಸ್ಸುಗಳನ್ನು ಮಾಡದಿರುವುದು ಕುತೂಹಲ ಮೂಡಿಸಿದರೂ ಈ ಸಮಿತಿ ಮಾಡುವ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸಚಿವ ಸಂಪುಟದ ಮುಂದೆ ಮಂಡಿಸಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆಯೇ ವಿನಃ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ಗಮನಾರ್ಹ ಸಂಗತಿಯಾಗಿದೆ.
ನೂತನ 7 ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಸಂದರ್ಭ ಕೆಲವೊಂದು ಮಾನದಂಡಗಳನ್ನು ಪಾಲಿಸಿದ್ದಲ್ಲದೆ ಷರತ್ತುಗಳನ್ನೂ ಹಾಕಿತ್ತು, ಅದರ ಪ್ರಕಾರ ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನಾಗಲಿ, ವಾಹನವನ್ನಾಗಿ ಖರೀದಿಸುವಂತಿಲ್ಲ. ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾಲಯ ಮಂಜೂರು ಮಾಡಿರುವ ಹುದ್ದೆಗಳಲ್ಲಿ ಅವಶ್ಯ ಹುದ್ದೆಗಳನ್ನು ಬಳಸಿಕೊಳ್ಳಬೇಕು. ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವಂತಿಲ್ಲ.
ಈ ಹೊಸ ವಿಶ್ವವಿದ್ಯಾನಿಲಯಗಳು ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಬಳಸದೇ ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ವಿನೂತನ ಮಾದರಿಯಂತೆ ಕಾರ್ಯನಿರ್ವಹಿಸಬೇಕು. ಎನ್ನುವ ಷರತ್ತುಗಳು ಇವೆ. ಕೊಡಗು ವಿಶ್ವವಿದ್ಯಾಲಯ ಬಹುತೇಕ ಈ ಎಲ್ಲಾ ಷರತ್ತುಗಳು ಮತ್ತು ಮಾನದಂಡಗಳ ಅಡಿಯಲ್ಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಮುಚ್ಚುವ ಆತಂಕ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಕೊಡಗು ವಿಶ್ವವಿದ್ಯಾಲಯ ಮಾತೃ ವಿಶ್ವವಿದ್ಯಾಲಯವಾದ ಮಂಗಳೂರು ವಿವಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿದ್ದಾಗಲೇ 103 ಎಕರೆ ವಿಸ್ತೀರ್ಣದ ಹಸಿರು ತುಂಬಿದ ಜ್ಞಾನ ಕಾವೇರಿ ಕ್ಯಾಂಪಸ್ ಒಳಗೊಂಡಿತ್ತು. ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಉತ್ತಮ ಗ್ರಂಥಾಲಯ, ಶುದ್ಧ ಕುಡಿಯುವ ನೀರು, ಸಿಸಿಟಿವಿ ಮತ್ತು 24/7 ಭದ್ರತೆ, ಕೌಶಲ್ಯ ಅಭಿವೃದ್ಧಿ ಕೋಶ, ತರಬೇತಿ ಮತ್ತು ಉದ್ಯೋಗ ಕೋಶ ಮೊದಲಾದ ಸೌಲಭ್ಯಗಳೂ ಇದ್ದ ಕಾರಣ ಹೊಸದಾಗಿ ವಿವಿ ಆರಂಭವಾದ ಸಂದರ್ಭ ಹೊಸ ಮೂಲಭೂತ ಸೌಕರ್ಯಗಳ ಅಗತ್ಯವೇ ಬಂದಿರಲಿಲ್ಲ. ಇದು ಕೂಡ ಕೊಡಗು ವಿವಿ ಮುಂದುವರಿಯಲು ಪೂರಕ ಅಂಶವಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿದೆ.
ರಾಜ್ಯದಲ್ಲಿರುವ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವಂತೆ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ಫೆ.13 ಮತ್ತು ಮೇ 9ಕ್ಕೆ ಸಭೆಗಳನ್ನು ನಡೆಸಿದೆ. ಸಮಿತಿ ಇಲ್ಲಿಯವರೆಗೆ ಯಾವುದೇ ಶಿಫಾರಸ್ಸುಗಳನ್ನು ನೀಡಿರುವುದಿಲ್ಲ. ಈ ಸಮಿತಿ ನೀಡುವ ಶಿಫಾರಸ್ಸುಗಳನ್ನು ಪರಿಶೀಲಿಸಿ, ಸಚಿವ ಸಂಪುಟದ ಮುಂದೆ ಮಂಡಿಸಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ
ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ
ಕೊಡಗಿನ ಇಬ್ಬರು ಶಾಸಕರ ಸತತ ಪ್ರಯತ್ನ, ಜಿಲ್ಲೆಯ ಜನತೆಯ ಹೋರಾಟದ ಫಲವಾಗಿ ಕೊಡಗು ವಿವಿ ಹೀಗೆಯೇ ಮುಂದುವರಿಯಲಿದೆ. ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರು ಕೂಡ ಸದನದಲ್ಲಿ ಹೇಳಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕ ಬೇಡ. ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಕೊಡಗು ವಿವಿಗೆಗೆ ಸೇರ್ಪಡೆ ಆಗುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು.
ಕೆ.ಎಸ್. ಕೃಷ್ಣೇಗೌಡ, ಅಧ್ಯಕ್ಷ, ಕೊಡಗು ವಿಶ್ವ ವಿದ್ಯಾಲಯ ಹಿತರಕ್ಷಣಾ ಬಳಗ