ಕುಶಾಲನಗರ:
ಕನ್ನಡ ನಾಡಿನಲ್ಲಿರುವ ಭಾಷಾ ಶ್ರೀಮಂತಿಕೆ ಜಗತ್ತಿನ ಯಾವುದೇ ಭಾಷೆಯಲ್ಲಿ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು. ಕುಶಾಲನಗರ ತಾಲೂಕು ಚಿಕ್ಕ ಅಳುವಾರದಲ್ಲಿರುವ ಕೊಡಗು ವಿವಿ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕನ್ನಡ ನಾಡಿನಲ್ಲಿ ಹುಟ್ಟಿರುವ ಹೆಮ್ಮೆ ನಮ್ಮದು. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ನಮ್ಮ ಕರ್ನಾಟಕ ರಾಜ್ಯ ಪ್ರಾಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ಪ್ರಾದೇಶಿಕವಾರು ಜಿಲ್ಲೆಗಳನ್ನು ವಿಂಗಡಣೆಗೊAಡಿದ್ದು, ಇಲ್ಲಿನ ಭಾಷೆ, ಮಣ್ಣು ಮತ್ತು ಜೀವರಾಶಿಗಳಿಂದ ಸಂಪತ್ಭರಿತವಾಗಿರುವುದನ್ನು ಕಾಣಬಹುದು.
ಕರ್ನಾಟಕದಲ್ಲಿ ಕನ್ನಡ ತಾಯಿ ಮಕ್ಕಳಾಗಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಬೆಳೆಸಬೇಕು ಮತ್ತು ಉಳಿಸಬೇಕು. ಆದರೆ ಇಂದಿಗೂ ಅದೆಷ್ಟೋ ಮಕ್ಕಳಿಗೆ ಸರಿಯಾಗಿ ಕನ್ನಡವನ್ನು ಮಾತನಾಡುವುದಕ್ಕೆ ಬರುವುದಿಲ್ಲ. ಬದಲಿಗೆ ಇಂಗ್ಲೀಷ್ ಭಾಷೆಯನ್ನು ಮಾತನಾಡುವುದೇ ಬಹಳ ದೊಡ್ಡ ಗೌರವ ಎಂಬ ಕಲ್ಪನೆಯಲ್ಲಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯನ್ನು ಹೊರತುಪಡಿಸಿ ಮತ್ತಿನ್ನಾವುದೇ ಭಾಷೆಗಳನ್ನು ಕಲಿಯಬಾರದು ಎಂಬ ಯಾವುದೇ ನಿರ್ಬಂಧವಿಲ್ಲ. ಆದರೂ ಕನ್ನಡ ತಾಯಿಯ ಮಕ್ಕಳಾಗಿ ಕನ್ನಡವನ್ನು ಮಾತನಾಡದಿದ್ದರೆ ಹೇಗೆ? ಸುವರ್ಣ ಕರ್ನಾಟಕ ಸಂಭ್ರಮದಲ್ಲಿರುವ ನಾವು, ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕರ್ನಾಟಕ, ಕನ್ನಡ, ಕನ್ನಡಿಗರ ಬಗೆಗಿನ ಕಾಳಜಿಯನ್ನು ತೋರಬಾರದು. ವರ್ಷದ 365 ದಿನಗಳು ಕೂಡ ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವದ ಬಗೆಗಿನ ವಿಚಾರವನ್ನು ಎಲ್ಲೆಡೆ ಪಸರಿಸುವಂಥ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ಸಿಬ್ಬಂದಿÄ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.