ಕುಶಾಲನಗರ:
ಸೈಬರ್ ಸೆಕ್ಯೂರಿಟಿಯಲ್ಲಿ 50 ಲಕ್ಷ ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಪಡೆಯಲು ಯಾವುದೇ ವಿದ್ಯಾಭ್ಯಾಸದ ಅಗತ್ಯ ಇಲ್ಲ ಕುಶಲತೆಯೊಂದಿದ್ದರೆ ಸಾಕು ಎಂದು ಅಂತಾರಾಷ್ಟಿçÃಯ ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತಾ ತಜ್ಞ ಡಾ. ಉದಯಶಂಕರ್ ಪುರಾಣಿಕ್ ಹೇಳಿದರು. ಕೊಡಗು ವಿಶ್ವ ವಿದ್ಯಾಲಯದಲ್ಲಿ ಎರಡು ದಿನಗಳ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮಹತ್ವದ ಕುರಿತು ಮಂಗಳವಾರ ಉಪನ್ಯಾಸ ನೀಡಿದರು.
ವಿಶ್ವಮಟ್ಟದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಲ್ಲಿ ಭಾರತಕ್ಕೆ ಇರುವ ಮಹತ್ವ ಹಾಗೂ ಮನ್ನಣೆ ಬೇರಾವ ದೇಶಕ್ಕೂ ಇಲ್ಲ ಹಾಗಾಗಿ ದೇಶದ ಯುವ ಸಮೂಹ ಭವಿಷ್ಯದ ಬಗ್ಗೆ ಯಾವುದೇ ಆತಂಕ ಪಡದೇ ಉದ್ಯೋಗಗಳ ಕೌಶಲ್ಯದ ಕುರಿತು ಹೆಚ್ಚು ಆಸಕ್ತರಾಗಬೇಕು. 4 ಕೋಟಿಯಷ್ಟು ಉದ್ಯೋಗಗಳನ್ನು ಒದಗಿಸಿರುವ ಭಾರತ ದೇಶ ಜಗತ್ತಿನ ಮೂರನೇ ದೇಶವಾಗಿದ್ದು, ಲಕ್ಷಾಂತರ ಕೋಟಿ ರೂ.ಗಳ ಹೂಡಿಕೆಯಾಗುತ್ತಿದೆ. ಹಳ್ಳಿಯ ಸಾಮಾನ್ಯ ರೈತನೂ ಬಳಸುವ ಮೊಬೈಲ್‌ಗೆ ಪ್ರಸಕ್ತ ಸನ್ನಿವೇಶಗಳ ಆಧುನಿಕ ತಂತ್ರಜ್ಞಾನದ ಮಾಹಿತಿ ಲಭಿಸಬೇಕು.
ಆ ಮೂಲಕ ಆ ಕೃಷಿಕನಿಗೆ ಮಳೆ, ಬೆಳೆ, ಹವಾಮಾನಗಳ ಪೂರ್ಣ ಚಿತ್ರಣ ಲಭಿಸುವಂತಾಗಬೇಕು. ಈ ನಿಟ್ಟಿನಲ್ಲಿ ಇಂದಿನ ವಿದ್ಯಾರ್ಥಿ ಯುವ ಸಮೂಹ ಹೊಸ ಹೊಸ ತಂತ್ರಜ್ಞಾನದತ್ತ ದಾಪುಗಾಲಿಡಬೇಕು. ಯುವ ಜನತೆ ಹೊಸ ಹೊಸ ಆವಿಷ್ಕಾರಗಳತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಯಾವುದೇ ಉದ್ಯೋಗ ಅಥವಾ ಕಲಿಕೆಯಲ್ಲಿ ಆಸಕ್ತಿ ಮುಖ್ಯ.
ವಿವಿಗಳು ಹಾಗೂ ಸಾಧಕರು ಜೀವನಕ್ಕೆ ದಾರಿ ತೋರಿಸಬಹುದು. ಆದರೆ ತಮ್ಮ ಉಜ್ವಲ ಭವಿಷ್ಯವನ್ನು ತಾವೇ ಕಟ್ಟಿಕೊಳ್ಳಬೇಕು. ಹಳ್ಳಿಗಾಡುಗಳಲ್ಲಿ ಎಂತಹ ಸಾಮಾನ್ಯರು ಕೂಡ ಅತೀ ಅವಶ್ಯವಿರುವ ಯುಪಿಐ ಬಳಸುವುದನ್ನು ಕಲಿತಷ್ಟೇ ಆಸಕ್ತಿಯಿಂದ ಇನ್ನಿತರ ಕೌಶಲ್ಯಗಳಲ್ಲಿ ಪ್ರಾವೀಣ್ಯತೆ ಸಾಧಿಸಬೇಕು.
ದಶಕಗಳ ಹಿಂದೆ ನಮ್ಮ ಹಣ ನಾವು ಪಡೆಯೋಕೆ ಸಾಲಾಗಿ ಬ್ಯಾಂಕುಗಳಲ್ಲಿ ನಿಲ್ಲುತ್ತಿದ್ದೆವು.
ಆದರೆ ಇಂದು ಮೊಬೈಲ್ ಗಳೇ ಬ್ಯಾಂಕ್ ಗಳಾಗಿವೆ. ಆದ್ದರಿಂದ ಕೇಂದ್ರ ಸರ್ಕಾರ ಉಚಿತವಾಗಿ ನೀಡಿರುವ "ಸ್ವಯಂ" ವೆಬ್ ಸೈಟ್ ಅನ್ನು ಹೆಚ್ಚಾಗಿ ಬಳಸುವ ಮೂಲಕ ತಮಗೆ ಬಿಡುವಿನ ಸಮಯದಲ್ಲಿ ತಮಗೆ ಸಾಧ್ಯ ಹಾಗೂ ಸರಳ ಎನಿಸುವ ಯಾವುದೇ ಕೌಶಲ್ಯಗಳತ್ತ ತೊಡಗಿಸಿಕೊಳ್ಳಬಹುದು ಎಂದರು.
ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್. ಗಂಗಾಧರ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಡಾ.ತರೀಕೆರೆ ತಾರಾನಾಥ್, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಹೆಚ್.ಜಂಗಮಶೆಟ್ಟಿ, ಬೆಂಗಳೂರಿನ ಉದ್ಯಮ ಸಂಸ್ಥೆಯ ಮುಖ್ಯಸ್ಥ ಬಿ.ಪಿ. ವೆಂಕಟೇಶ ಮೂರ್ತಿ, ನಾಗಪುರದ ಐಐಎಂ ಸಂಸ್ಥೆಯ ಡಾ. ಒ.ಪಿ.ಗೋಯಲ್ ಉಪನ್ಯಾಸ ನೀಡಿದರು.